
ನವದೆಹಲಿ: ನರೇಂದ್ರ ಮೋದಿ ಅವರು 3ನೇ ಬಾರಿಗೆ ಪ್ರಧಾನಿ ಆದ ಬಳಿಕ ಮೊದಲ ಬಾರಿಗೆ ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡುತ್ತಿದ್ದಾರೆ. ನಾಳಿನ ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಿಸಲು ಮೋದಿ ಅವರು ಶ್ರೀನಗರಕ್ಕೆ ತೆರಳಿದಿದ್ದಾರೆ. ಈ ಬಗ್ಗೆ ಖುದ್ದು ಮೋದಿ ಅವರೇ ಎಕ್ಸ್ನಲ್ಲಿ ಪೋಸ್ಟ್ ಹಾಕಿದ್ದಾರೆ.


ಶ್ರೀನಗರಕ್ಕೆ ಹೊರಟೆ, ಅಲ್ಲಿ ನಾನು ಎರಡು ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದೇನೆ ಎಂದು ತಿಳಿಸಿದ್ದಾರೆ. ತಮ್ಮ ಭೇಟಿ ವೇಳೆ ಮೋದಿ ಅವರು, 1500 ಕೋಟಿ ರೂ.ಗಿಂತ ಹೆಚ್ಚಿನ ಮೌಲ್ಯದ ಪ್ರಮುಖ ಯೋಜನೆಗಳು ಉದ್ಘಾಟನೆ ಅಥವಾ ಶಂಕುಸ್ಥಾಪನೆ ಮಾಡಲಿದ್ದಾರೆ.
ಈ ಯೋಜನೆಗಳು ಮೂಲಸೌಕರ್ಯ, ನೀರು ಸರಬರಾಜು, ಶಿಕ್ಷಣ ಮತ್ತು ಹೆಚ್ಚಿನದನ್ನು ಒಳಗೊಂಡಿವೆ. ಜೊತೆಗೆ ನಾಳೆ ಬೆಳಿಗ್ಗೆ ನಾನು ಶ್ರೀನಗರದಲ್ಲಿ ಯೋಗ ದಿನದ ಕಾರ್ಯಕ್ರಮದಲ್ಲಿ ಭಾಗವಹಿಸುತ್ತೇನೆ ಎಂದು ಪ್ರಧಾನಿ ಎಕ್ಸ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.


ಐತಿಹಾಸಿಕ ಮೂರನೇ ಅವಧಿಗೆ ಅಧಿಕಾರ ವಹಿಸಿಕೊಂಡ ನಂತರ ಮೋದಿಯವರ ಮೊದಲ ಭೇಟಿ ಇದಾಗಿದೆ. ಪ್ರಸಿದ್ಧ ದಾಲ್ ಸರೋವರದ ದಡದಲ್ಲಿ 10 ನೇ ಅಂತರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಗುವುದು. ಇದರಲ್ಲಿ ವಿವಿಧ ಕ್ಷೇತ್ರಗಳ 7,000 ಕ್ಕೂ ಹೆಚ್ಚು ಜನರು ಭಾಗಲಿಯಾಗಲಿದ್ದು, ಮೋದಿ ಅವರಿಗೆ ಸಾಥ್ ನೀಡಲಿದ್ದಾರೆ.
