
ಬೆಳಗಾವಿ: ರಾಜ್ಯದಲ್ಲಿನ ಎಲ್ಲಾ ಸರಕಾರಿ ಇಲಾಖೆ, ನಿಗಮ, ಮಂಡಳಿ, ನಗರಸಭೆ ಹಾಗೂ ಸರಕಾರದ ಅಧೀನ ಸಂಸ್ಥೆಗಳಿಗೆ ಸೇರಿದ 15 ವರ್ಷಕ್ಕಿಂತ ಹಳೆಯ ವಾಹನಗಳನ್ನು ಕಡ್ಡಾಯವಾಗಿ ಸ್ಕ್ರ್ಯಾಪ್ ಮಾಡುವುದಕ್ಕೆ ರಾಜ್ಯ ಸರಕಾರ ಅನುಮೋದನೆ ನೀಡಿದೆ ಎಂದು ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.



ಡಿಸೆಂಬರ್ 17ರಂದು ವಿಧಾನಪರಿಷತ್ತಿನಲ್ಲಿ ಸದಸ್ಯ ಗೋವಿಂದ ರಾಜು ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಸೆಪ್ಟೆಂಬರ್ 12ರಂದು ಈ ಕುರಿತು ಅಧಿಕೃತ ಆದೇಶ ಹೊರಡಿಸಲಾಗಿದೆ ಎಂದರು. ಹದಿನೈದು ವರ್ಷ ಮೀರಿದ ಎಲ್ಲಾ ಸರಕಾರಿ ವಾಹನಗಳನ್ನು ರಾಜ್ಯದಲ್ಲಿ ಸ್ಥಾಪಿತವಾಗಿರುವ ನೋಂದಾಯಿತ ವಾಹನ ಸ್ಕ್ರ್ಯಾಪಿಂಗ್ ಕೇಂದ್ರಗಳಲ್ಲಿಯೇ (RVSF) ನಾಶಪಡಿಸಬೇಕು ಎಂದು ಸ್ಪಷ್ಟಪಡಿಸಿದರು.
ಎನ್.ಐ.ಸಿ ನೀಡಿದ ಮಾಹಿತಿಯಂತೆ, 2025ರ ಡಿಸೆಂಬರ್ 4ರ ತನಕ ಸಾರಿಗೆ ಸಂಸ್ಥೆಗಳ ಬಸ್ಸುಗಳನ್ನು ಹೊರತುಪಡಿಸಿ ಒಟ್ಟು 18,552 ಸರಕಾರಿ ವಾಹನಗಳ ನೋಂದಣಿ ರದ್ದುಪಡಿಸಲಾಗಿದೆ. ಇದರಲ್ಲಿ ಈಗಾಗಲೇ 1,493 ವಾಹನಗಳನ್ನು ಸ್ಕ್ರ್ಯಾಪ್ ಮಾಡಲಾಗಿದ್ದು, ಉಳಿದ 17,059 ವಾಹನಗಳನ್ನು ಇನ್ನೂ ಸ್ಕ್ರ್ಯಾಪ್ ಮಾಡಬೇಕಿದೆ ಎಂದು ಸಚಿವರು ತಿಳಿಸಿದರು.


ಇನ್ನೂ, 2023ರಿಂದ ಇಲ್ಲಿವರೆಗೆ ರಾಜ್ಯದ ನಾಲ್ಕು ನಿಗಮ ಸಂಸ್ಥೆಗಳಲ್ಲಿ 3,212 ವಾಹನಗಳನ್ನು ನಿಷ್ಕ್ರಿಯಗೊಳಿಸಲಾಗಿದೆ. ಈ ಪೈಕಿ 579 ವಾಹನಗಳ ನಿಷ್ಕ್ರಿಯಗೊಳಿಸುವ ಪ್ರಕ್ರಿಯೆ ಬಾಕಿ ಇದೆ ಎಂದು ಅವರು ಮಾಹಿತಿ ನೀಡಿದರು.


