
ಮಂಗಳೂರು: ಬಜಪೆ ಪೊಲೀಸ್ ಠಾಣಾ ವ್ಯಾಪ್ತಿಯ ಮಳಲಿ ನಾರ್ಲಪದವು ರಸ್ತೆಯಲ್ಲಿ ಶನಿವಾರ ಬೆಳಿಗ್ಗೆ ಬೀಫ್ ಸಾಗಾಟ ಮಾಡುತ್ತಿದ್ದ ವ್ಯಕ್ತಿಯನ್ನು ತಡೆದು ಹಲ್ಲೆ ನಡೆಸಿದ ಆರೋಪದ ಮೇಲೆ ಇಬ್ಬರು ಯುವಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಘಟನೆಯಲ್ಲಿ 11 ವರ್ಷದ ಬಾಲಕಿಯೊಬ್ಬಳು ಗಾಯಗೊಂಡಿದ್ದಾಳೆ.



ಶನಿವಾರ ಬೆಳಿಗ್ಗೆ ಸುಮಾರು 10 ಗಂಟೆಯ ವೇಳೆಗೆ ಅಬ್ದುಲ್ ಸತ್ತಾರ್ ಮುಲ್ಲರ್ ಪಟ್ನ ಎಂಬುವವರು ತಮ್ಮ 11 ವರ್ಷದ ಮಗಳೊಂದಿಗೆ ಬೈಕ್‌ನಲ್ಲಿ ಸುಮಾರು 19 ಕೆಜಿ ದನದ ಮಾಂಸವನ್ನು ಯಾವುದೇ ದಾಖಲೆಗಳಿಲ್ಲದೆ ಸಾಗಿಸುತ್ತಿದ್ದರು. ಮಳಲಿ ನಾರ್ಲಪದವು ರಸ್ತೆಯಲ್ಲಿ ಹೋಗುತ್ತಿದ್ದಾಗ, ಟಾಟಾ ಸುಮೋ ವಾಹನದಲ್ಲಿ ಬಂದ ಎಡಪದವು ನಿವಾಸಿಗಳಾದ ಸುಮಿತ್ ಭಂಡಾರಿ (21) ಮತ್ತು ರಜತ್ ನಾಯ್ಕ್ (30) ಎಂಬುವವರು ಬೈಕನ್ನು ಅಡ್ಡಗಟ್ಟಿದ್ದಾರೆ.
ಈ ವೇಳೆ ಬೈಕ್ ನಿಯಂತ್ರಣ ತಪ್ಪಿ ಬಿದ್ದಿದ್ದು, ಸೈಲೆನ್ಸರ್ ತಗುಲಿ ಬಾಲಕಿಯ ಕಾಲಿಗೆ ಸುಟ್ಟ ಗಾಯಗಳಾಗಿವೆ. ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತಿದ್ದಂತೆ ಸತ್ತಾರ್ ಅವರು ಬೈಕ್ ಬಿಟ್ಟು ಸ್ಥಳದಿಂದ ಓಡಿಹೋಗಿದ್ದಾರೆ. ತಕ್ಷಣ ಸ್ಥಳೀಯರು ಧಾವಿಸಿ ಗಾಯಗೊಂಡ ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಸುಮಿತ್ ಮತ್ತು ರಜತ್ ಅವರನ್ನು ಪೊಲೀಸರು ಠಾಣೆಗೆ ಕರೆಸಿ ಪ್ರತ್ಯೇಕವಾಗಿ ವಿಚಾರಣೆ ನಡೆಸಿದ್ದಾರೆ. ಈ ವೇಳೆ ಇಬ್ಬರೂ ಗೊಂದಲಕಾರಿ ಹೇಳಿಕೆ ನೀಡಿದ್ದಾರೆ. ಮೆಡಿಕಲ್ ರೆಪ್ ಆಗಿರುವ ರಜತ್ ನಾಯ್ಕ್, ನಾವು ಮಹರ್ಷಿ ಕ್ಲಿನಿಕ್‌ಗೆ ಔಷಧಿ ನೀಡಲು ಹೋಗಿದ್ದೆವು ಎಂದು ತಿಳಿಸಿದ್ದಾನೆ. ಆದರೆ ಪೊಲೀಸರು ವೈದ್ಯರನ್ನು ಸಂಪರ್ಕಿಸಿದಾಗ ಅವರು ಯಾವುದೇ ಔಷಧಿ ವಿತರಣೆಯಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಬಳಿಕ ದೇವಸ್ಥಾನವೊಂದಕ್ಕೆ ಹೋಗಲು ದಾರಿ ಕೇಳುತ್ತಿದ್ದೆವು ಎಂದು ಹೇಳಿದರೂ, ಯಾವ ದೇವಸ್ಥಾನ ಎಂಬ ಪ್ರಶ್ನೆಗೆ ಆರೋಪಿಗಳು ಉತ್ತರಿಸಲು ತಡಬಡಾಯಿಸಿದ್ದಾರೆ.


ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಾಲಕಿಯ ಹೇಳಿಕೆಯನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ. “ನಮ್ಮನ್ನು ಅಡ್ಡಗಟ್ಟಿದವರು ತಂದೆಯ ಮೇಲೆ ಕೈಯಿಂದ ಹಲ್ಲೆ ನಡೆಸಿದ್ದಾರೆ” ಎಂದು ಬಾಲಕಿ ತಿಳಿಸಿದ್ದಾಳೆ.

ಹಲ್ಲೆ ಮತ್ತು ದಾರಿ ತಡೆದ ಆರೋಪದ ಮೇಲೆ ಸುಮಿತ್ ಮತ್ತು ರಜತ್ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಬಿಲ್ ಇಲ್ಲದೆ ಬೀಫ್ ಸಾಗಿಸುತ್ತಿದ್ದ ಅಬ್ದುಲ್ ಸತ್ತಾರ್ ವಿರುದ್ಧ ಪೊಲೀಸರು ಸುವೊಮೋಟೋ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಬಜಪೆ ಪೊಲೀಸರು ಈ ಕುರಿತು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

