
ಭಾರತದಲ್ಲಿ ನಿರುದ್ಯೋಗ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಮಹತ್ವದ ಹೆಜ್ಜೆಯನ್ನು ಇಟ್ಟಿದೆ. ಈಚೆಗೆ ಕೇಂದ್ರ ಸರ್ಕಾರವು ಮಂಡಿಸಿದ್ದ ಕೇಂದ್ರ ಮಧ್ಯಂತರ ಬಜೆಟ್ 2024ರಲ್ಲೂ ದೇಶದಲ್ಲಿ ಉದ್ಯೋಗ ಸೃಷ್ಟಿಗೆ ಸಾಕಷ್ಟು ಆದ್ಯತೆ ನೀಡಲಾಗಿದೆ.


ಕಳೆದ ಬಾರಿಯ ಚುನಾವಣೆಯಲ್ಲಿ ಭಾರತದಲ್ಲಿನ ನಿರುದ್ಯೋಗ ವಿಷಯ ಹಾಗೂ ಯುವ ನಿರುದ್ಯೋಗಿಗಳ ಸಮಸ್ಯೆ ಗಂಭೀರವಾಗಿ ಚರ್ಚೆಯಾಗಿತ್ತು. ಅಲ್ಲದೇ, ಬಿಜೆಪಿಗೆ ನಿರೀಕ್ಷಿತ ಪ್ರಮಾಣದಲ್ಲಿ ಸೀಟುಗಳನ್ನು ಗೆಲ್ಲುವಲ್ಲಿ ಹಿನ್ನಡೆಯಾಗುವುದಕ್ಕೆ ಭಾರತದಲ್ಲಿನ ನಿರುದ್ಯೋಗ ಸಮಸ್ಯೆಯೂ ಕಾರಣ, ಸರ್ಕಾರ ಈ ವಿಷಯವನ್ನು ನಿರ್ಲಕ್ಷಿಸಿತ್ತು ಎಂದು ವಿಶ್ಲೇಷಿಸಲಾಗಿತ್ತು. ಇದಾದ ಮೇಲೆ ಸರ್ಕಾರ ಈ ನಿಟ್ಟಿನಲ್ಲಿ ಗಂಭೀರ ಹೆಜ್ಜೆಗಳನ್ನು ಇರಿಸುತ್ತಿದೆ.
ದೇಶದ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ನಿರುದ್ಯೋಗಿಗಳಾಗಿದ್ದಾರೆ. ಈ ಸಮಸ್ಯೆಯನ್ನು ತಪ್ಪಿಸುವ ಉದ್ದೇಶದಿಂದ ಕೇಂದ್ರ ಸರ್ಕಾರವು (Pm Internship Scheme) ಎನ್ನುವ ಯೋಜನೆಯನ್ನು ಪರಿಚಯಿಸಿದೆ. ದೇಶದಲ್ಲಿ ಯುವ ನಿರುದ್ಯೋಗಿ ಪ್ರಮಾಣವನ್ನು ಕಡಿಮೆ ಮಾಡುವುದು ಇದರ ಮುಖ್ಯ ಉದ್ದೇಶಗಳಲ್ಲಿ ಒಂದು. ದೇಶದ ಪ್ರತಿಷ್ಠಿತ ಕಂಪನಿಗಳಿಗೆ ಕೇಂದ್ರ ಸರ್ಕಾರವು ಪ್ರಧಾನ ಮಂತ್ರಿ ಇಂಟರ್ನ್‌ಶಿಪ್ ಯೋಜನೆಗೆ ಸಂಬಂಧಿಸಿದಂತೆ ಮಾರ್ಗಸೂಚಿ ಮತ್ತು ಅರ್ಹತಾ ಮಾನದಂಡಗಳನ್ನು ಬಿಡುಗಡೆ ಮಾಡಿದೆ. ಅಲ್ಲದೇ ಇಂಟರ್ನ್‌ಶಿಪ್ ಸ್ಕೀಂ ಪ್ರಾಯೋಗಿಕ ಯೋಜನೆಗೆ ಕೇಂದ್ರ ಸರ್ಕಾರವು ಬರೋಬ್ಬರಿ 800 ಕೋಟಿ ರೂಪಾಯಿ ಮೊತ್ತವನ್ನು ಮೀಸಲಿರಿಸಿದೆ.


1 ಕೋಟಿ ಜನರಿಗೆ ಉದ್ಯೋಗ: ಕೇಂದ್ರ ಸರ್ಕಾರವು ಪರಿಚಯಿಸಿರುವ ಈ ಯೋಜನೆಯಿಂದಾಗಿ ಬರೋಬ್ಬರಿ 1 ಕೋಟಿಗೂ ಹೆಚ್ಚು ಜನರಿಗೆ ಅನುಕೂಲವಾಗಲಿದೆ ಎಂದು ಅಂದಾಜಿಸಲಾಗಿದೆ. ಈ ಪ್ರಯೋಗಿಕ ಯೋಜನೆಯಿಂದಾಗಿ ದೇಶದಲ್ಲಿ ಶಿಕ್ಷಣ ಹಾಗೂ ಉದ್ಯೋಗದ ನಡುವೆ ಇರುವ ಕಂದಕ ಮುಚ್ಚಲಿದೆ ಎನ್ನಲಾಗಿದೆ. ಪ್ರತಿ ವರ್ಷವೂ ದೇಶದಲ್ಲಿ ಲಕ್ಷಾಂತರ ಜನ ಪದವಿ ಹಾಗೂ ಉನ್ನತ ವ್ಯಾಸಾಂಗ ಪೂರೈಸುತ್ತಿದ್ದಾರೆ. ಆದರೆ, ಈ ರೀತಿ ಉನ್ನತ ವಿದ್ಯಾಭ್ಯಾಸ ಮಾಡಿದವರಿಗೂ ಕಾಲೇಜು ಮುಗಿಸಿ ಹೊರಗೆ ಬಂದ ಮೇಲೆ ಉದ್ಯೋಗ ಸಿಗುತ್ತಿಲ್ಲ. ಇದಕ್ಕೆ ಶಿಕ್ಷಣ ಹಾಗೂ ಉದ್ಯೋಗ ನಡುವೆ ಇರುವ ಗ್ಯಾಪ್ ಕಾರಣ. ಅಂದರೆ, ಉದ್ಯೋಗಲ್ಲಿ (ಕಂಪನಿಗಳಲ್ಲಿ) ಕೆಲಸ ಮಾಡುವ ಕೌಶಲ್ಯತೆ ಹಾಗೂ ಟೆಕ್ನಿಕ್ಸ್ ಓದಿ ಬರುವ ಹಲವರಲ್ಲಿ ಇರುವುದಿಲ್ಲ ಎನ್ನುವುದು. ಈ ಸಂಬಂಧ ಇತ್ತೀಚಿನ ವರ್ಷಗಳಲ್ಲಿ ಹಲವು ವರದಿ ಪ್ರಕಟವಾಗಿದೆ. ಈಗ ಕೇಂದ್ರ ಸರ್ಕಾರವು ಪರಿಚಯಿಸಿರುವ ಯೋಜನೆಯಿಂದಾಗಿ ವಿದ್ಯಾರ್ಥಿಗಳು ಇಂಟರ್ನ್‌ಶಿಫ್ ಮಾಡಲಿದ್ದಾರೆ. ಮುಂದೆ ಅವರು ಉದ್ಯೋಗಕ್ಕೆ ಸೇರುವ ಸಂದರ್ಭದಲ್ಲೂ ಇದು ಸಾಕಷ್ಟು ಸಹಕಾರಿಯಾಗಲಿದೆ. ಸುಲಭವಾಗಿ ವಿದ್ಯಾರ್ಥಿಗಳು ಕಂಪನಿಗಳಲ್ಲಿನ ಮ್ಯಾನೇಜ್‌ಮೆಂಟ್, ಕೆಲಸ ವ್ಯವಸ್ಥೆ ಹಾಗೂ ಮುಖ್ಯವಾಗಿ ಕೆಲಸಗಳಲ್ಲಿನ ಕೌಶಲ್ಯವನ್ನು ಕಲಿಯಬಹುದು.

ಉದ್ದೇಶಿತ ಯೋಜನೆಯಿಂದಾಗಿ ಐದು ವರ್ಷದಲ್ಲಿ ದೇಶದ ಅತ್ಯುನ್ನತ 500 ಕಂಪನಿಗಳಲ್ಲಿ 1 ಕೋಟಿ ಯುವಕರಿಗೆ ಅವಕಾಶ ಸಿಗಲಿದೆ. ಶಿಕ್ಷಣ ಮತ್ತು ಉದ್ಯೋಗದ ನಡುವಿನ ಅಂತರ ಕಡಿಮೆಯಾಗಲಿದೆ ಎಂದು ಹೇಳಲಾಗಿದೆ. ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯ (mca)ವು ಇದಕ್ಕಾಗಿ ಆನ್‌ಲೈನ್ ಪೋರ್ಟ್‌ವೊಂದನ್ನು (https://pminternship.mca.gov.in/login/) ಅಭಿವೃದ್ಧಿಪಡಿಸಿದೆ.https://pminternship.mca.gov.in/login/ಈ ಪೋರ್ಟಲ್ ಇಂಟರ್ನ್‌ಶಿಪ್ ಮಾಡುವ ವಿದ್ಯಾರ್ಥಿಗಳು ಹಾಗೂ ಕಂಪನಿಗಳ ನಡುವೆ ವೇದಿಕೆ ಸೃಷ್ಟಿಸಲಿದೆ.
ಅಕ್ಟೋಬರ್ 3ರಿಂದ ಅಕ್ಟೋಬರ್ 10ರ ವರೆಗೆ ಕಂಪನಿಗಳು ಇಂಟರ್ನ್‌ಶಿಪ್ ಯೋಜನೆಯಲ್ಲಿ ಭಾಗವಹಿಸಲಿವೆ ಎಂದು ಹೇಳಲಾಗಿದೆ. ಆಸಕ್ತ ವಿದ್ಯಾರ್ಥಿಗಳು ಅಕ್ಟೋಬರ್ 12ರ ಮಧ್ಯರಾತ್ರಿಯ ಒಳಗಾಗಿ ಪೋರ್ಟಲ್‌ನಲ್ಲಿ ಹೆಸರು ನೋಂದಾಯಿಸಿಕೊಳ್ಳಬಹುದು. ಆಯ್ಕೆಯಾದ ( ಶಾರ್ಟ್‌ಲಿಸ್ಟ್) ಅಭ್ಯರ್ಥಿಗಳ ಪಟ್ಟಿ ಅಕ್ಟೋಬರ್ 26 ರ ಒಳಗೆ ಕಂಪನಿಗಳಿಗೆ ಸಿಗಲಿದೆ. 12 ತಿಂಗಳ ಕಾಲ ಇಂಟರ್ನ್‌ಶಿಫ್ ಇರಲಿದೆ. ಅಂತಿಮ ಅಭ್ಯರ್ಥಿಗಳ ಪಟ್ಟಿಯನ್ನು ಕಂಪನಿಗಳು ನವೆಂಬರ್ 27ರ ಒಳಗೆ ಬಿಡುಗಡೆ ಮಾಡುವ ಸಾಧ್ಯತೆ ಇದೆ. ಇದೇ ವರ್ಷ ಡಿಸೆಂಬರ್ 2 ರಿಂದ 12 ತಿಂಗಳವರೆಗೆ ಇಂಟರ್ನ್‌ಶಿಫ್ ಇರಲಿದೆ.
12 ತಿಂಗಳ ಅವಧಿಯಲ್ಲಿ ಕನಿಷ್ಠ 6 ತಿಂಗಳ ಅವಧಿಗೆ ಇಂಟರ್ನಿಗಳು ಕಂಪನಿಗಳಲ್ಲಿ ಕೆಲಸ ಮಾಡಲಿದ್ದಾರೆ. ಇಂರ್ಟ್‌ನಿಗಳು ಆರ್ಥಿಕ ನೆರವನ್ನೂ ಪಡೆಯಲಿದ್ದಾರೆ. ಮಾಸಿಕ 5,000 ಸಾವಿರ ರೂಪಾಯಿ ವೇತನ ಸಿಗಲಿದೆ. ಇದರಲ್ಲಿ ಕೇಂದ್ರ ಸರ್ಕಾರದಿಂದ 4,500 ರೂಪಾಯಿ ಹಾಗೂ ಕಂಪನಿಗಳ ಸಿಎಸ್‌ಆರ್ ಫಂಡ್‌ನಿಂದ 500 ರೂಪಾಯಿ ಸಿಗಲಿದೆ. ಅಲ್ಲದೇ ಒಂದು ಬಾರಿಗೆ ಪ್ರತಿ ಇಂಟರ್ನಿಗೂ 6,000 ಸಾವಿರ ರೂಪಾಯಿ ಸಿಗಲಿದೆ ಎಂದು ಹೇಳಲಾಗಿದೆ.
ಈ ರಾಜ್ಯದಲ್ಲಿ ಬೇಡಿಕೆ ಹೆಚ್ಚಳ: ದೇಶದ ವಿವಿಧ ರಾಜ್ಯಗಳಿಂದ ಈ ಯೋಜನೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇಲ್ಲಿಯವರೆಗೆ ಈ ಯೋಜನೆಯ ಅಡಿಯಲ್ಲಿ 111 ಕಂಪನಿಗಳು ಮುಂದೆ ಬಂದಿವೆ. ದೇಶದ ಪ್ರಮುಖ ರಾಜ್ಯಗಳಾದ ಮಹಾರಾಷ್ಟ್ರ, ಗುಜರಾತ್, ಉತ್ತರಾಖಂಡ ಹಾಗೂ ತೆಲಂಗಾಣ ಮುಂಚೂಣಿಯಲ್ಲಿದೆ. 1,077 ಆಯ್ಕೆಗಳು (ಆಫರ್‌ಗಳು) ಈಗಾಗಲೇ ವೆಬ್‌ಸೈಟ್‌ನಲ್ಲಿ ದಾಖಲಾಗಿದೆ ಎನ್ನಲಾಗಿದೆ.