
ಉಳ್ಳಾಲ : ಲೋಕಸಭಾ ಚುನಾವಣೆಯ ಫಲಿತಾಂಶ ಪ್ರಕಟದ ಬಳಿಕ ಮಂಗಳವಾರ ಸಂಜೆ ಕುಂಪಲದಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಿದ್ದ ಬಿಜೆಪಿ ಕಾರ್ಯಕರ್ತನ ತಲೆಗೆ ಕಬ್ಬಿಣದ ಸಲಾಕೆಯಿಂದ ಹೊಡೆದು ಕೊಲೆಗೆತ್ನಿಸಿದ ಘಟನೆ ಕುಂಪಲ ಬಾರ್ದೆ ಎಂಬಲ್ಲಿ ಬುಧವಾರ ಸಂಜೆ ನಡೆದಿದೆ.


ಸದ್ಯ ಉಳ್ಳಾಲ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಕುಂಪಲ ಮೂರುಕಟ್ಟ, ಪಲ್ಲ ನಿವಾಸಿ ಬಿಜೆಪಿ ಕಾರ್ಯಕರ್ತ ಪ್ರವೀಣ್ ಪೂಜಾರಿ(35) ಹಲ್ಲೆಗೊಳಗಾದ ಯುವಕ. ಬಿಜೆಪಿ ಗೆಲುವು ಸಾಧಿಸಿದ್ದ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಕರ್ತ ಪ್ರವೀಣ್ ಪೂಜಾರಿ ಮತ್ತು ಸ್ನೇಹಿತರು ಮಂಗಳವಾರ ಸಂಜೆ ಕುಂಪಲ ಸರಕಾರಿ ಶಾಲೆಯ ಮುಂದೆ ಪಟಾಕಿ ಸಿಡಿಸಿ ಸಂಭ್ರಮಿಸಿದ್ದರು.
ಈ ಪ್ರದೇಶದಲ್ಲಿ ಸ್ಥಳೀಯ ಸಂಸ್ಥೆಯೊಂದರ ಕಾರ್ಯಾಲಯವಿತ್ತು. ಆ ಕಚೇರಿ ಮುಂಭಾಗವೇ ಪಟಾಕಿ ಸಿಡಿಸಿದ್ದರ ವಿರುದ್ಧ ಸಂಸ್ಥೆಯ ಸದಸ್ಯರು ಮತ್ತು ಬಿಜೆಪಿ ಕಾರ್ಯಕರ್ತರ ಮಧ್ಯೆ ಮಾತಿನ ಚಕಮಕಿ ನಡೆದಿತ್ತು ಎನ್ನಲಾಗಿದೆ. ಅದೇ ಸಿಟ್ಟಿನಲ್ಲಿ ಕಾಂಗ್ರೆಸ್ ಕಾರ್ಯಕರ್ತ ಎಂದು ಹೇಳಲಾಗುತ್ತಿರುವ ಗೌತಮ್ ಬುಧವಾರ ಸಂಜೆ ಕುಂಪಲ ಬಾರ್ದೆ ಎಂಬಲ್ಲಿ ಪ್ರವೀಣ್ ಮೇಲೆ ದಾಳಿ ನಡೆಸಿದ್ದಾನೆ. ಪ್ರವೀಣ್ ನನ್ನು ಅವಾಚ್ಯವಾಗಿ ನಿಂದಿಸಿದ ಗೌತಮ್ ಕಬ್ಬಿಣದ ರಾಡ್ ನಿಂದ ತಲೆಗೆ ಹಲ್ಲೆಗೈದು ಮೊಬೈಲನ್ನು ಪುಡಿಗೈದಿದ್ದಾನೆ. ಗಂಭೀರವಾಗಿ ಗಾಯಗೊಂಡ ಪ್ರವೀಣ್ ರನ್ನು ಸ್ಥಳೀಯರು ತೊಕ್ಕೊಟ್ಟಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರವೀಣ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಉಳ್ಳಾಲ ಪೊಲೀಸರು ಆರೋಪಿ ಗೌತಮ್ ನನ್ನು ವಶಕ್ಕೆ ಪಡೆದಿದ್ದಾರೆ.

