
Read Time:1 Minute, 22 Second
ಉಳ್ಳಾಲ: ಕಡಲ ತೀರದಲ್ಲಿ ಮೀನಿಗೆಂದು ಗಾಳ ಹಾಕುತ್ತಿದ್ದ ತಂಡವೊಂದಕ್ಕೆ ಕಲ್ಲುಗಳ ಮಧ್ಯೆ ಕೊಳೆತ ಮೃತದೇಹ ಸಿಲುಕಿರುವುದು ಗೋಚರಿಸಿದ್ದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.


ಮಾಹಿತಿ ಪಡೆದ ಉಳ್ಳಾಲ ಪೊಲೀಸರು ಶಿವಾಜಿ ಜೀವರಾಕ್ಷಕ ಈಜುಗಾರರ ಸದಸ್ಯರಿಗೆ ಮಾಹಿತಿ ನೀಡಿದ್ದರು. ಉಳ್ಳಾಲ ಮೊಗವೀರಪಟ್ನ ಶಿವಾಜಿ ಜೀವ ರಕ್ಷಕ ಈಜುಗಾರರ ಸಂಘದ ಸದಸ್ಯರು ಕೊಳೆತ ಸ್ಥಿತಿಯಲ್ಲಿದ್ದ ಮೃತದೇಹವನ್ನು ಹೆಗಲ ಮೇಲೆ ಇಟ್ಟುಕೊಂಡು 3-4 ಕಿ.ಮೀ ದೂರ ಎತ್ತಿಕೊಂಡು ಸಾಗಿ ಆಂಬುಲೆನ್ಸ್ ವಾಹನಕ್ಕೆ ತಲುಪಿಸುವ ಮೂಲಕ ಮಾನವೀಯತೆ ಮೆರೆದು ಪೊಲೀಸರಿಗೆ ಸಹಕರಿಸಿದ್ದಾರೆ.
ಸುಮಾರು 40-45 ರ ಹರೆಯದ ವ್ಯಕ್ತಿಯ ಮೃತದೇಹ ಇದಾಗಿದ್ದು, ಇತ್ತೀಚೆಗೆ ಮಂಗಳೂರು ಬಂದರಿನಿಂದ ಮೀನುಗಾರಿಕೆಗೆಂದು ತೆರಳಿದ್ದ ತಮಿಳು ಮೂಲದ ವ್ಯಕ್ತಿ ದೋಣಿಯಿಂದ ಬಿದ್ದು ನಾಪತ್ತೆ ಆಗಿರುವ ಕುರಿತು ಬಂದರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಅದೇ ವ್ಯಕ್ತಿ ಆಗಿರಬಹುದೆಂಬ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.

