
ಅಮೆರಿಕದ ಮಾಜಿ ಅಧ್ಯಕ್ಷ ಹಾಗೂ ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿಯಾಗಿರುವ ಡೊನಾಲ್ಡ್ ಟ್ರಂಪ್ ಮೇಲೆ ಮತ್ತೆ ಗುಂಡಿನ ದಾಳಿ ನಡೆದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.


ಫ್ಲೋರಿಡಾ ಗಾಲ್ಫ್ ಕ್ಲಬ್‌ನಲ್ಲಿ ಭಾನುವಾರ ಆಟವಾಡುತ್ತಿದ್ದ ಸಂದರ್ಭದಲ್ಲಿ ಟ್ರಂಪ್ ಅವರನ್ನು ಗುರುಯಾಗಿಸಿ ಗುಂಡಿನ ದಾಳಿ ನಡೆಸಲಾಗಿದ್ದು ಅದೃಷ್ಟವಶಾತ್ ಗುಂಡಿನ ದಾಳಿಯಿಂದ ಟ್ರಂಪ್ ಬಚಾವಾಗಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ, ಕಳೆದ ಒಂದು ತಿಂಗಳ ಹಿಂದೆಯಷ್ಟೇ ಗುಂಡಿನ ದಾಳಿ ನಡೆದಿತ್ತು ಈ ವೇಳೆ ಟ್ರಂಪ್ ಅವರ ಕಿವಿಗೆ ಗಾಯವಾಗಿತ್ತು.
ಈ ನಡುವೆ ಭಾನುವಾರ ಗಾಲ್ಫ್ ಕ್ಲಬ್ ನಲ್ಲಿ ಇದ್ದ ವೇಳೆ ಅವರನ್ನು ಗುರುಯಾಗಿಸಿ ಗುಂಡಿನ ದಾಳಿ ನಡೆದಿದೆ ಎಂದು ಟ್ರಂಪ್ ಪ್ರಚಾರದ ವಕ್ತಾರ ಸ್ಟೀವನ್ ಚೆಯುಂಗ್ ತಿಳಿಸಿದ್ದಾರೆ.


ಈ ಕುರಿತು ಹೇಳಿಕೆ ನೀಡಿದ ಟ್ರಂಪ್ ಎರಡನೇ ಬಾರಿಗೆ ನನ್ನ ಮೇಲೆ ದಾಳಿಗೆ ಯತ್ನ ನಡೆದಿದೆ ಆದರೆ ನಾನು ಸುರಕ್ಷಿತವಾಗಿದ್ದೇನೆ, ಯಾರಿಂದಲೂ ನನ್ನನ್ನು ಕುಗ್ಗಿಸಲು ಸಾಧ್ಯವಿಲ್ಲ ಅಲ್ಲದೆ ಯಾವುದೇ ಬೆದರಿಕೆಗೆ ನಾನು ಜಗ್ಗುವ ಪ್ರಶೆಯೇ ಇಲ್ಲ ಎಂದು ಹೇಳಿದ್ದಾರೆ.

ಘಟನೆಗೆ ಸಂಬಂಧಿಸಿ ರಯಾನ್ ವೆಸ್ಲಿ ರೌತ್ ಎಂದು ಗುರುತಿಸಲಾದ ವ್ಯಕ್ತಿಯನ್ನು ಪೊಲೀಸ್ ಅದಿಕಾರಿಗಳು ಬಂಧಿಸಿದ್ದು ಜೊತೆಗೆ ಆತನ ಬಳಿಯಿದ್ದ ಶಸ್ತ್ರಾಸ್ತ್ರವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಯಾವ ಉದ್ದೇಶಕ್ಕಾಗಿ ಗುಂಡಿನ ದಾಳಿ ನಡೆಸಿದ್ದ ಇದರ ಹಿಂದೆ ಯಾರು ಇದ್ದಾರೆ ಎಂಬುದು ಪೂರ್ಣ ತನಿಖೆ ಬಳಿಕ ಹೊರ ಬರಲಿದೆ.
ರಿಯಾನ್ ರುತ್ ಯಾರು?
ರಿಯಾನ್ ರುತ್ ಉತ್ತರ ಕೆರೊಲಿನಾದ ಗ್ರೀನ್ಸ್‌ಬೊರೊ ಪ್ರದೇಶದ ನಿವಾಸಿಯಾಗಿದ್ದಾನೆ, ವೃತ್ತಿಯಲ್ಲಿ ಕಟ್ಟಡ ನಿರ್ಮಾಣ ಕೆಲಸಗಾರನಾಗಿದ್ದಾನೆ. ರುತ್ ಯಾವುದೇ ಮಿಲಿಟರಿ ಹಿನ್ನೆಲೆಯನ್ನು ಹೊಂದಿಲ್ಲ, ಆದರೆ ಸಾಮಾಜಿಕ ಮಾಧ್ಯಮದಲ್ಲಿ ಸಶಸ್ತ್ರ ಮಿಲಿಟರಿ ಸಂಘರ್ಷದಲ್ಲಿ ಭಾಗವಹಿಸುವ ತನ್ನ ಇಚ್ಛೆಯನ್ನು ವ್ಯಕ್ತಪಡಿಸಿದ್ದ ಎನ್ನಲಾಗಿದೆ. ಅದರಲ್ಲೂ ಉಕ್ರೇನ್ ಮೇಲೆ ರಷ್ಯಾ ದಾಳಿ ನಡೆಸಿದ ಬಳಿಕ ಉಕ್ರೇನ್ ಪರವಾಗಿ ಯುದ್ಧ ಮಾಡುವ ಇಚ್ಛೆಯನ್ನೂ ಆತ ವ್ಯಕ್ತಪಡಿಸಿದ್ದು ಸಾಮಾಜಿಕ ಜಾಲತಾಣದಲ್ಲಿ ಉಕ್ರೇನ್‌ಗಾಗಿ ಹೋರಾಡಲು ಮತ್ತು ಸಾಯಲು ನಾನು ಸಿದ್ಧ ಎಂದು ಬರೆದುಕೊಂಡಿದ್ದನಂತೆ.