
ಸರಕಾರಿ ಪದವಿಪೂರ್ವ ಕಾಲೇಜು ವೇಣೂರು ಪ್ರೌಢಶಾಲಾ ವಿಭಾಗದಲ್ಲಿ ಸಮಾಜ ವಿಜ್ಞಾನ ಶಿಕ್ಷಕಿಯಾಗಿ ಕರ್ತವ್ಯವನ್ನು ನಿರ್ವಹಿಸುತ್ತಿರುವ ಶ್ರೀಮತಿ ಪ್ರೇಮ ಪ್ರಭಾಕರ್ ರವರಿಗೆ ಶಿಕ್ಷಕರತ್ನ ಪ್ರಶಸ್ತಿ ಹಾಗೂ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ನಾರಾವಿ ಇಲ್ಲಿ ಮುಖ್ಯ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಶ್ರೀ ಪ್ರಭಾಕರ್ ನಾರಾವಿ ಇವರಿಗೆ ಆರ್‌ಪಿ ಕಲಾ ಸೇವಾ ಟ್ರಸ್ಟ್ ಪರವಾಗಿ ಸಾಧಕರ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.



ಬಂಟ್ವಾಳ ತಾಲೂಕಿನ ಕೆಂತಲೆ, ಮಾವಿನ ಕಟ್ಟೆಯ ಶ್ರೀ ನೇಮು ಪೂಜಾರಿ ಹಾಗೂ ಗುಲಾಬಿ ದಂಪತಿಗಳ ಪುತ್ರಿ ಯಾಗಿರುವ ಶ್ರೀಮತಿ ಪ್ರೇಮ ಪ್ರಭಾಕರ್ ಅವರು 25 ವರ್ಷಗಳು ಪ್ರಾಥಮಿಕ ಶಾಲೆಯಲ್ಲಿ ಗಣಿತ ಶಿಕ್ಷಕಿಯಾಗಿ ಕರ್ತವ್ಯವನ್ನು ನಿರ್ವಹಿಸಿ, ನಂತರ ಸೇವಾ ಭಡ್ತಿ ಯನ್ನು ಪಡೆದು, ಸರಕಾರಿ ಪದವಿ ಪೂರ್ವ ಕಾಲೇಜು ವೇಣೂರು, ಇಲ್ಲಿ ಪ್ರೌಢಶಾಲಾ ವಿಭಾಗದಲ್ಲಿ ಸಮಾಜ ವಿಜ್ಞಾನ ಶಿಕ್ಷಕಿಯಾಗಿ ಕರ್ತವ್ಯವನ್ನು ನಿರ್ವಹಿಸುತ್ತಿದ್ದಾರೆ. ಸಾವಿರಾರು ವಿದ್ಯಾರ್ಥಿಗಳ ಬಾಳಿಗೆ ಬೆಳಕಾಗಿರುವ ಇವರ ಶಿಕ್ಷಣ ಕ್ಷೇತ್ರದ ಸೇವೆಯನ್ನು ಪರಿಗಣಿಸಿ, ಶಿಕ್ಷಕರ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ನಾರಾವಿಯ ಅಮ್ಮು ಪೂಜಾರಿ ಹಾಗೂ ನೀಲಮ್ಮ ದಂಪತಿಗಳ ಪುತ್ರ ರಾಗಿರುವ ಶ್ರೀ ಪ್ರಭಾಕರ್ ಎನ್ ಇವರು ಬೆಳ್ತಂಗಡಿ ತಾಲೂಕಿನ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷರಾಗಿ, ಶಿಕ್ಷಕರ ಸಂಘದ ಅಧ್ಯಕ್ಷರಾಗಿ, ಬೆಳ್ತಂಗಡಿ ತಾಲೂಕಿನ ಕಬಡ್ಡಿ ತೀರ್ಪುಗಾರರ ಮಂಡಳಿಯ ಅಧ್ಯಕ್ಷರಾಗಿ, ಕಳೆದ ಹತ್ತು ವರ್ಷಗಳಿಂದ ತಾಲೂಕು ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಕ್ರೀಡಾಧಿಕಾರಿಯಾಗಿ ಕರ್ತವ್ಯವನ್ನು ನಿರ್ವಹಿಸಿರುತ್ತಾರೆ. ಕರಾವಳಿ ಪ್ರದೇಶದ ಹೆಮ್ಮೆಯ ರಾಷ್ಟ್ರೀಯ ಕಬಡ್ಡಿ ತೀರ್ಪುಗಾರರಾಗಿ ಹಾಗೂ ಸತತ 23 ವರ್ಷಗಳಿಂದ ಕಬಡ್ಡಿ ತೀರ್ಪುಗಾರಿಕೆ ಹಾಗೂ ಸಂಘಟನಾ ಸಾಧನೆಯನ್ನು ಪರಿಗಣಿಸಿ ಸಾಧಕರ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪ್ರಸ್ತುತ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ನಾರಾವಿಯಲ್ಲಿ ಮುಖ್ಯ ಶಿಕ್ಷಕರಾಗಿ ಕರ್ತವ್ಯವನ್ನು ನಿರ್ವಹಿಸುತ್ತಿದ್ದಾರೆ.
ಈ ಶಿಕ್ಷಕ ದಂಪತಿಗಳಿಗೆ ಪುತ್ತೂರಿನ ವಿಧಾನ ಸಭಾ ಕ್ಷೇತ್ರದ ಮಾಜಿ ಶಾಸಕರಾಗಿರುವ ಶ್ರೀ ಸಂಜೀವ ಮಠಂದೂರು ಹಾಗೂ ಮಾಜಿ ಶಾಸಕಿ ಶಕುಂತಲಾ ಶೆಟ್ಟಿಯವರು ಆರ್ ಪಿ ಕಲಾ ಸೇವಾ ಟ್ರಸ್ಟ್ ನ ಬಾಲ ಪ್ರತಿಭೆಗಳ ಗಾಯನ ಕಾರ್ಯಕ್ರಮದ ಗ್ರಾಂಡ್ ಫಿನಾಲೆ, ಹಾಗೂ ಸಾಧಕರಿಗೆ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರಧಾನವನ್ನು ಮಾಡಿದರು. ಕಾರ್ಯಕ್ರಮದಲ್ಲಿ ಆರ್ ಪಿ ಕಲಾ ಸೇವಾ ಟ್ರಸ್ಟ್ ನ ಅಧ್ಯಕ್ಷರಾಗಿರುವ ರವಿ ಪಾಂಬಾರು, ಪದಾಧಿಕಾರಿಗಳು, ಹಾಗೂ ಇತರ ಗಣ್ಯ ವ್ಯಕ್ತಿಗಳು ಉಪಸ್ಥಿತರಿದ್ದರು.