
ಪುತ್ತೂರು: ಆಟೋರಿಕ್ಷಾದಿಂದ ಇಳಿದು ರಸ್ತೆ ದಾಟುತ್ತಿದ್ದ ಹೋಟೆಲ್ ಮಾಲೀಕರೊಬ್ಬರಿಗೆ ಎದುರಿನಿಂದ ಬಂದ ಇನ್ನೊಂದು ರಿಕ್ಷಾ ಡಿಕ್ಕಿ ಹೊಡೆದ ಪರಿಣಾಮ, ಅವರು ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ತಾಲೂಕಿನ ಕೌಡಿಚ್ಚಾರ್ ಮೈಂದನಡ್ಕ ರಸ್ತೆಯ ಪಾಪೆಮಜಲು ಎಂಬಲ್ಲಿ ನಡೆದಿದೆ.ಪಾಪೆಮಜಲು ನಿವಾಸಿ ಸುಭಾಷ್ ಕುಲಾಲ್ (55) ಮೃತಪಟ್ಟವರು.ಸುಭಾಷ್ ಕುಲಾಲ್ ಅವರುಕೌಡಿಚ್ಚಾರ್‌ನಲ್ಲಿ ಹೋಟೆಲ್ ನಡೆಸುತ್ತಿದ್ದರು.ಎಂದಿನಂತೆ ತಮ್ಮ ಹೋಟೆಲ್ ವ್ಯವಹಾರ ಮುಗಿಸಿ ರಿಕ್ಷಾದಲ್ಲಿ ಮನೆಗೆ ವಾಪಸಾಗಿದ್ದರು. ಪಾಪೆಮಜಲು ಬಳಿ ರಿಕ್ಷಾದಿಂದ ಇಳಿದ ಅವರು, ರಸ್ತೆ ದಾಟಲು ಮುಂದಾಗಿದ್ದಾರೆ.


ಎಂದು ಈ ಸಂದರ್ಭದಲ್ಲಿ ವೇಗವಾಗಿ ಬಂದ ಇನ್ನೊಂದು ರಿಕ್ಷಾ ಅವರಿಗೆ ಬಲವಾಗಿ ಡಿಕ್ಕಿ ಹೊಡೆದಿದೆ.ಡಿಕ್ಕಿಯ ರಭಸಕ್ಕೆ ರಸ್ತೆಗೆ ಎಸೆಯಲ್ಪಟ್ಟ ಅವರು, ತೀವ್ರ ಸ್ವರೂಪದ ಗಾಯಗಳಿಂದ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ ತಿಳಿದುಬಂದಿದೆ.ವಿಷಯ ತಿಳಿದು ಸಂಪ್ಯ ಠಾಣಾ ಪೊಲೀಸರು ತಕ್ಷಣ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಪುತ್ತೂರು ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಲಾಗಿದೆ. ಈ ಸಂಬಂಧ ಸಂಪ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.ಮೃತರು ಪತ್ನಿ ಮತ್ತು ಓರ್ವ ಪುತ್ರಿಯನ್ನು ಅಗಲಿದ್ದಾರೆ.

