
ಪುತ್ತೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಅತ್ಯಾಚಾರ ಹಾಗೂ ನಂಬಿಕೆದ್ರೋಹ ಪ್ರಕರಣಕ್ಕೆ ಸಂಬಂಧಿಸಿದಂತೆ, ಬಿಜೆಪಿ ಮುಖಂಡ ಪಿಜಿ ಜಗನ್ನಿವಾಸ್ ರಾವ್ ಪುತ್ರ ಬಂಧಿತ ಆರೋಪಿ ಶ್ರೀಕೃಷ್ಣ ಜೆ. ರಾವ್ ಸಲ್ಲಿಸಿರುವ ಜಾಮೀನು ಅರ್ಜಿಯ ವಿಚಾರಣೆಯನ್ನು ಇಲ್ಲಿನ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಶನಿವಾರಕ್ಕೆ (ಜು. 19) ಮುಂದೂಡಿದೆ.


ಶುಕ್ರವಾರ ಪ್ರಕರಣವು ನ್ಯಾಯಪೀಠದ ಮುಂದೆ ವಿಚಾರಣೆಗೆ ಬಂದಾಗ, ಸಂತ್ರಸ್ತೆಯೂ ಸ್ವತಃ ನ್ಯಾಯಾಲಯಕ್ಕೆ ಹಾಜರಾಗಿ ಆರೋಪಿಗೆ ಜಾಮೀನು ನೀಡದಂತೆ ಮನವಿ ಮಾಡಿದರು. ಬಳಿಕ ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರು (ಪಿಪಿ) ಹಾಜರಾಗಿ, ತನಿಖಾಧಿಕಾರಿಯ (ಐಒ) ವರದಿಯೊಂದಿಗೆ ಜಾಮೀನು ಅರ್ಜಿಗೆ ಪ್ರಬಲ ಆಕ್ಷೇಪಣೆ ಸಲ್ಲಿಸಿದರು.ಈ ವೇಳೆ, ಅರ್ಜಿದಾರರ ಪರ ವಕೀಲರು, ಸರ್ಕಾರದ ಆಕ್ಷೇಪಣೆಗೆ ಪ್ರತಿಯಾಗಿ ವಾದ ಮಂಡಿಸಲು ಕಾಲಾವಕಾಶ ನೀಡುವಂತೆ ನ್ಯಾಯಪೀಠಕ್ಕೆ ಮನವಿ ಮಾಡಿದರು. ವಕೀಲರ ಮನವಿಯನ್ನು ಪುರಸ್ಕರಿಸಿದ ನ್ಯಾಯಪೀಠ, ವಾದ-ಪ್ರತಿವಾದಕ್ಕಾಗಿ ಪ್ರಕರಣದ ವಿಚಾರಣೆಯನ್ನು ಜುಲೈ 19ಕ್ಕೆ ನಿಗದಿಪಡಿಸಿ ಆದೇಶಿಸಿತು.