
ಮಂಗಳೂರು: ಹಿರಿಯ ಯಕ್ಷಗಾನ ಕಲಾವಿದರಾದ ಕುಂಬಳೆ ಶ್ರೀಧರ್ ರಾವ್ ಹೃದಯಾಘಾತಕ್ಕೀಡಾಗಿ ಜುಲೈ 5ರಂದು ನಿಧನರಾಗಿದ್ದಾರೆ ಎಂದು ತಿಳಿದು ಬಂದಿದೆ


ನೆಕ್ಕಿಲಾಡಿ ಗ್ರಾಮದ ಶಾಂತಿನಗರ ಸಮೀಪದ ಬೇರಿಕೆ ನಿವಾಸಿ ಶ್ರೀಧರ ರಾವ್ ಅವರಿಗೆ ಬೆಳಿಗ್ಗೆ ತೀವು ಎದೆ ನೋವು ಕಾಣಿಸಿಕೊಂಡಿದ್ದು ಪುತ್ತೂರಿನ ಮಹಾವೀರ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಯಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ.
ಇವರು 1949ರ ಮಾರ್ಚ್ ನಲ್ಲಿ ಕುಂಬಳೆ, ಕಾಸರಗೋಡು ಜಿಲ್ಲೆ, ಕೇರಳ ರಾಜ್ಯದಲ್ಲಿ ಜನಿಸಿದರು. ಮೂಲ್ಕಿ, ಇರಾ, ಕರ್ನಾಟಕ ಧರ್ಮಸ್ಥಳ ಮೇಳಗಲ್ಲಿ ನಾಲ್ಕು ದಶಕಗಳಿ೦ದ, ತೆ೦ಕು ತಿಟ್ಟಿನ ಅಪ್ರತಿಮ ಸ್ತ್ರೀವೇಷಧಾರಿಯಾಗಿ ಕಲಾಸೇವೆ ಮಾಡಿದ್ದಾರೆ. ಇವರಿಗೆ ಹಲವಾರು ಸ೦ಘ-ಸ೦ಸ್ಥೆಗಳಿ೦ದ ಸನ್ಮಾನ ಹಾಗೂ ಪ್ರಶಸ್ತಿಗಳು ದೊರೆತಿವೆ.


ಒಂದು ಕಾಲಘಟ್ಟದ ‘ಅಮ್ಮುಬಲ್ಲಾಳ್ತಿ, ದಾಕ್ಷಾಯಿಣಿ, ಲಕ್ಷ್ಮೀ, ಸುಭದ್ರೆ’ ಪಾತ್ರಗಳನ್ನು ಜ್ಞಾಪಿಸಿಕೊಂಡರೆ ಕುಂಬ್ಳೆ ಶ್ರೀಧರ ರಾವ್ ಕಣ್ಣೆದುರು ಬರುತ್ತಾರೆ. ಕೊರಗ ಶೆಟ್ರ ಇರಾ ಮೇಳದಿಂದ ಶ್ರೀಧರ ರಾಯರ ವೃತ್ತಿ. ಮುಂದೆ ಕೂಡ್ಲು, ಪುನಃ ವಿಠಲ ಶೆಟ್ರ ಇರಾ (ಕುಂಡಾವು), ಮೂಲ್ಕಿ, ಕರ್ನಾಟಕ ಮೇಳಗಳ ತಿರುಗಾಟ. ಶ್ರೀ ಧರ್ಮಸ್ಥಳ ಮೇಳದಲ್ಲಿ ನಿರಂತರ ನಾಲ್ಕು 50 ವರ್ಷಗಳ ಸೇವೆ ಇವರದ್ದು ಎನ್ನಲಾಗಿದೆ.

ಕುಂಬಳೆ ಕಮಲಾಕ್ಷ ನಾಯಕ್ ಮತ್ತು ಚಂದು ಅವರಲ್ಲಿ ನಾಟ್ಯಾಭ್ಯಾಸ, ಉಡುಪಿ ಕಲಾ ಕೇಂದ್ರದಲ್ಲಿ ಬಡಗು ನೃತ್ಯಭ್ಯಾಸ. ಮತ್ತೆಲ್ಲಾ ಕಲಿಕೆಗಳು ರಂಗದಲ್ಲಿ ಅಭ್ಯಯಿಸಿದ್ದಾರೆ. ಇವರ ನಿಧನವು ಯಕ್ಷ ರಂಗಕ್ಕೆ ತುಂಬಲಾರದ ನಷ್ಟವಾಗಿದೆ. ಇವರ ಅಗಲುವಿಕೆಗೆ ಅಭಿಮಾನಿಗಳ, ಯಕ್ಷಪ್ರಿಯರು, ಕುಟುಂಬಸ್ಥರು, ಬಂಧು ಬಳಗ ಕಂಬನಿ ಮಿಡಿದಿದೆ. ಮೃತರು ಪತ್ನಿ ನಿವೃತ್ತ ಶಿಕ್ಷಕಿ ಸುಲೋಚನಾ, ಪುತ್ರರುರಾದ ಗಣೇಶ್ ಪ್ರಸಾದ್, ಕೃಷ್ಣಪ್ರಸಾದ್ ಮತ್ತು ದೇವಿಪ್ರಸಾದ್, ಸೊಸೆಯಂದಿರು ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.