
ಕಡಬ: ಕ್ಷುಲ್ಲಕ ಕಾರಣಕ್ಕೆ ತಂದೆಯೊಂದಿಗೆ ಜಗಳವಾಡಿದ ಮಗನೊಬ್ಬ, ತಂದೆಗೆ ಚೂರಿಯಿಂದ ಇರಿದು ಬಳಿಕ ತಾನೂ ಕೋವಿಯಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ರಾಮಕುಂಜ ಗ್ರಾಮದ ಪಾದೆ ಎಂಬಲ್ಲಿ ಶನಿವಾರ ಸಂಜೆ ನಡೆದಿದೆ.



ರಾಮಕುಂಜ ಗ್ರಾಮದ ಪಾದೆ ನಿವಾಸಿ ವಸಂತ ಅಮೀನ್ ಅವರ ಪುತ್ರ, ಮಂಗಳೂರಿನ ಖಾಸಗಿ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿ ಮೋಕ್ಷ ಮೃತಪಟ್ಟ ದುರ್ದೈವಿ. ಘಟನೆಯಲ್ಲಿ ತಂದೆ ವಸಂತ ಅಮೀನ್ ಅವರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಮಂಗಳೂರಿನ ಎಜೆ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆಯ ವಿವರ:


ಮೂಲತಃ ಕೇರಳದವರಾದ ವಸಂತ ಅಮೀನ್ ಅವರು ರಾಮಕುಂಜದ ಪಾದೆಯಲ್ಲಿ ಜಾಗ ಖರೀದಿಸಿ ಮನೆ ನಿರ್ಮಿಸಿಕೊಂಡಿದ್ದರು. ಅಲ್ಲಿ ಅವರು ತಮ್ಮ ತಂದೆ ಹಾಗೂ ಮಗನೊಂದಿಗೆ ವಾಸವಾಗಿದ್ದರು. ಜನವರಿ 24ರಂದು ಸಂಜೆ ಯಾವುದೋ ವಿಷಯಕ್ಕೆ ಸಂಬಂಧಿಸಿದಂತೆ ತಂದೆ-ಮಗನ ನಡುವೆ ತೀವ್ರ ಮಾತಿನ ಚಕಮಕಿ ನಡೆದಿದೆ ಎನ್ನಲಾಗಿದೆ. ಈ ವೇಳೆ ಆವೇಶಕ್ಕೊಳಗಾದ ಮೋಕ್ಷ. ತಂದೆಗೆ ಚೂರಿಯಿಂದ ಇರಿದಿದ್ದಾನೆ. ಬಳಿಕ ಮನೆಯಲ್ಲಿದ್ದ ಕೋವಿಯಿಂದ ತನಗೆ ತಾನೇ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ವರದಿಯಾಗಿದೆ.

ಸ್ಥಳಕ್ಕೆ ಕಡಬ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಗ ಈ ಕೃತ್ಯ ಎಸಗಲು ನಿಖರ ಕಾರಣವೇನು ಎಂಬುದು ತಕ್ಷಣಕ್ಕೆ ತಿಳಿದುಬಂದಿಲ್ಲ. ಕುಟುಂಬದಲ್ಲಿನ ಕಲಹವೋ ಅಥವಾ ಬೇರೆನಾದರೂ ಕಾರಣವಿದೆಯೇ ಎಂಬ ಕುರಿತು ಪೊಲೀಸ್ ತನಿಖೆ ಮುಂದುವರಿದಿದೆ.

