
ಪುತ್ತೂರು: ಮೆದುಳಿನ ರಕ್ತಸ್ರಾವದಿಂದಾಗಿ ಮೃತಪಟ್ಟ ಯುವತಿಯ ಅಂಗಾಂಗಗಳನ್ನು ದಾನ ಮಾಡುವ ಮೂಲಕ ಕುಟುಂಬ ಬೇರೆ ಕುಟುಂಬಗಳ ಪಾಲಿಗೆ ಬೆಳಕಾಗಿ ಮಾನವೀಯತೆ ಮೆರೆದಿದೆ.



ಸುಳ್ಯದ ರಥಬೀದಿ ನಿವಾಸಿ ಸಿಂಧೂ ಎಂಬ ಯುವತಿ ಪುತ್ತೂರು ಆದರ್ಶ ಸೊಸೈಟಿಯಲ್ಲಿ ಕೆಲಸ ಮಾಡುತ್ತಿದ್ದರು. ಡಿ. 16 ರಂದು ಪುತ್ತೂರಿನಿಂದ ಸುಳ್ಯಕ್ಕೆ ಬಸ್ಸಿನಲ್ಲಿ ಹೋಗುತ್ತಿದ್ದ ವೇಳೆ ಬಸ್ಸಿನ ಸೀಟಿನಿಂದ ಜಾರಿ ಬಿದ್ದಿದ್ದರು. ತಕ್ಷಣವೇ ಅವರಿಗೆ ಸುಳ್ಯದ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದ್ದು, ನರಕ್ಕೆ ಸಮಸ್ಯೆ ಉಂಟಾಗಿದ್ದ ಕಾರಣದಿಂದ ಸುಳ್ಯದ ಆಸ್ಪತ್ರೆಯಿಂದ ಮಂಗಳೂರಿನ ಫಸ್ಟ್ ನ್ಯೂರೋ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಮೆದುಳಿನ ರಕ್ತಸ್ರಾವದ ಕಾರಣಕ್ಕೆ ಅವರಿಗೆ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ಆ ಬಳಿಕ ಒಮ್ಮೆ ಪ್ರಜ್ಞೆ ಬಂದಿತ್ತು. ಆದರೆ ಆ ಬಳಿಕ ಮತ್ತೆ ಕೋಮಾಗೆ ಜಾರಿದ್ದರು. ಮೆದುಳು ನಿಷ್ಕ್ರಿಯವಾಗಿದ್ದರೂ ಯಂತ್ರಗಳ ಸಹಾಯದಿಂದ ಇತರ ಅಂಗಾಂಗಗಳನ್ನು ಉಳಿಸಲಾಗಿತ್ತು. ಆ ಬಳಿಕ ಮನೆಯವರ ಜೊತೆ ಮಾತನಾಡಿ ಅಂಗಾಂಗಗಳನ್ನು ದಾನ ಮಾಡುವ ನಿರ್ಧಾರ ಕೈಗೊಳ್ಳಲಾಗಿತ್ತು.


ಅದರಂತೆ ಸಿಂಧೂ ಅವರ ಅಂಗಾಂಗಗಳನ್ನು ಆಂಬ್ಯುಲನ್ಸ್ ಮೂಲಕ ಮೈಸೂರಿನ ಅಪೋಲೋ ಆಸ್ಪತ್ರೆ, ನಿಟ್ಟೆ, ಎ.ಜೆ., ಕೆ. ಎಂ.ಸಿ. ಆಸ್ಪತ್ರೆಗಳಿಗೆ ದಾನ ಮಾಡಲಾಗಿದೆ. ಮೃತ ಸಿಂಧೂ ಅವರು ತಾಯಿ, ಸಹೋದರಿಯನ್ನು ಅಗಲಿದ್ದಾರೆ.


