ಗನ್ ತೋರಿಸಿ ವಿಧವೆಯಿಂದ ಡಿಕೆಶಿ ನಿವೇಶನ ವಶ: HD ಕುಮಾರಸ್ವಾಮಿ ಗಂಭೀರ ಆರೋಪ

0 0
Read Time:6 Minute, 22 Second

ಮೈಸೂರು ಚಲೋ ಪಾದಯಾತ್ರೆಯ ಮೂರನೇ ದಿನ ಚನ್ನಪಟ್ಟಣದಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದರು.

ಕಂಡ ಕಂಡವರ ಆಸ್ತಿಗಳನ್ನು ಸರಣಿಯಾಗಿ ಕಬ್ಜಾ ಮಾಡುತ್ತಿರುವ ವ್ಯಕ್ತಿಯೊಬ್ಬ ನನ್ನ ಆಸ್ತಿ, ನನ್ನ ತಂದೆಯವರ ಆಸ್ತಿಯ ಬಗ್ಗೆ ಮಾತನಾಡುತ್ತಿದ್ದಾರೆ.

ಆದರೆ, ಅವರು ಮಾಡುತ್ತಿರುವ ಅನಾಚಾರ, ಅಕ್ರಮಗಳ ಬಗ್ಗೆ ನೊಣವಿನಕೆರೆ ಅಜ್ಜಯ್ಯನ ಮುಂದೆ ಬಂದು ಪ್ರಮಾಣ ಮಾಡಲಿ ಎಂದು ಮತ್ತೆ ಸವಾಲು ಹಾಕಿದರು.

ಸದಾಶಿವನಗರದಲ್ಲಿ ಐವರು ವಿಧವಾ ತಾಯಂದಿರ ಬಳಿ ನಿವೇಶನಗಳ ಸೇಲ್ ಅಗ್ರಿಮೆಂಟ್ ಮಾಡಿಕೊಳ್ಳುತ್ತಾರೆ. ಆ ನಿವೇಶನಕ್ಕೆ ಸಂಪೂರ್ಣವಾಗಿ ಹಣ ಕೊಟ್ಟಿಲ್ಲ. ಕಾಂಗ್ರೆಸ್ ನಾಯಕ ಅಲ್ಲಂ ವೀರಭದ್ರಪ್ಪ ಅವರು ಒಂದು ನಿವೇಶನ ಖರೀದಿ ಮಾಡುವುದಾಗಿ ಅಡ್ವಾನ್ಸ್ ಕೊಡುತ್ತಾರೆ. ಆದರೆ, ಅವರು ಪೂರ್ಣ ಮೊತ್ತ ಕೊಡುವುದಿಲ್ಲ. ಆಮೇಲೆ ಈ ವ್ಯಕ್ತಿ ಮಧ್ಯಪ್ರವೇಶ ಮಾಡುತ್ತಾರೆ. ಈ ವ್ಯಕ್ತಿ ಮಂತ್ರಿಯಾದ ಮೇಲೆ ರಾತ್ರೋರಾತ್ರಿ ಅವರನ್ನು ಕರೆಸಿ ಹೆದರಿಸಿ, ಬೆದರಿಸಿ ಸೇಲ್ ಅಗ್ರಿಮೆಂಟಿಗೆ ರುಜು ಹಾಕಿಸಿಕೊಂಡಿದ್ದಾರೆ. ಇಂಥ ವ್ಯಕ್ತಿ ದೇವೇಗೌಡರ ಬಗ್ಗೆ ಮಾತನಾಡುತ್ತಾರೆ. ಅವರ ಹಾಗೆ ನಾವು ಮಾಡಿಲ್ಲ ಎಂದು ಕೇಂದ್ರ ಸಚಿವರು ಗುಡುಗಿದರು.

ಗನ್ ಇಟ್ಟು ವಿಧವಾ ತಾಯಂದಿರ ನಿವೇಶನಗಳನ್ನು ರಿಜಿಸ್ಟರ್ ಮಾಡಿಸಿಕೊಂಡವರು ನೀವು, ಅನ್ಯಾಯವಾಗಿ ಕಂಡೋರ ಆಸ್ತಿಯನ್ನು ಕಬ್ಜ ಮಾಡಿದವರು ನೀವು.. ಇಂಥ ಕೆಟ್ಟ ಹಿನ್ನೆಯ ನೀವು ನನ್ನ ಬಗ್ಗೆ ಮಾತನಾಡುತ್ತಿದ್ದೀರಿ. ಬನ್ನಿ ಪ್ರಮಾಣ ಮಾಡೋಣ. ಅಜ್ಜಯನ ಮುಂದೆ ಆಗಲಿ, ನಾಡಿನ ಅಧಿದೇವತೆ ತಾಯಿ ಚಾಮುಂಡೇಶ್ವರಿ ಅಮ್ಮನ ಮುಂದೆ ಆಗಲಿ ಪ್ರಮಾಣ ಮಾಡೋಣ. ನೀವೇ ವಿಧಾನಸೌಧಕ್ಕೆ ಬನ್ನಿ ಎಂದು ಕರೆದಿದ್ದಿರಲ್ಲ.. ಅಲ್ಲಿಗೂ ಬರಲು ನಾನು ತಯಾರಿದ್ದೇನೆ. ಬನ್ನಿ ಚರ್ಚೆ ಮಾಡೋಣ ಎಂದು ಕುಮಾರಸ್ವಾಮಿ ಅವರು ಡಿಕೆ ಶಿವಕುಮಾರ್ ಗೆ ಸವಾಲು ಹಾಕಿದರು.

ಈಗ ಚನ್ನಪಟ್ಟಣಕ್ಕೆ ಬಂದು ಏನೋ ಉದ್ದಾರ ಮಾಡುತ್ತೇವೆ ಎಂದು ಅಣ್ಣ ತಮ್ಮ ಬಂದಿದ್ದಾರೆ. ನೂರಾರು ವರ್ಷ ಬಾಳಿ ಬದುಕಿರುವ ಮನೆಗಳಿಗೆ ಈಗ ಬಂದು ಹಕ್ಕುಪತ್ರ ಕೊಡುತ್ತಾರಂತೆ. ಹಾಗಾದರೆ, ರಾಜ್ಯದಲ್ಲಿ ನಿಮ್ಮ ಸರಕಾರ ಬಂದು ಒಂದೂವರೆ ವರ್ಷ ಆಯಿತಲ್ಲವೇ..ಇಷ್ಟು ದಿನ ಏನು ಮಾಡ್ತಿದ್ರಪ್ಪ? ಎಂದು ಸಚಿವರು ತೀಕ್ಷ್ಣವಾಗಿ ಪ್ರಶ್ನಿಸಿದರು.

ಚನ್ನಪಟ್ಟಣವನ್ನು ಉದ್ಧಾರ ಮಾಡಿರೋದು ಇಲ್ಲಿನ ಜನರಿಗೆ ಬಹಳ ಚೆನ್ನಾಗಿ ಗೊತ್ತಿದೆ. ಇಲ್ಲಿನ ಮತ್ತಿಕೆರೆ ಬಳಿ ಕಲ್ಲು ಗೋಡೋನ್ ಇದೆ. ಅಲ್ಲಿ ಹೋಗಿ ನೋಡಿ, ಎಷ್ಟು ಕಲ್ಲುಗಳನ್ನು ತಂದು ಇಲ್ಲಿ ಗುಡ್ಡೆ ಹಾಕ್ತಿದ್ದೀರಿ? ಎಲ್ಲೆಲ್ಲಿಗೆ ಕಳಿಸುತ್ತಿದ್ದೀರಿ? ನನಗೆ ಗೊತ್ತಿಲ್ಲದ ವಿಷಯವೇ? ಎಂದ ಕೇಂದ್ರ ಸಚಿವರು ಬಹಿರಂಗ ಸಭೆಯಲ್ಲಿ ಆ ಕಲ್ಲು ಗೋದಾಮುಗಳ ಪೋಟೊಗಳನ್ನು ತೋರಿಸಿ, ಇದಕ್ಕೆ ಉತ್ತರ ಕೊಡಪ್ಪಾ..? ಎಂದು ಕೇಳಿದರು ಕುಮಾರಸ್ವಾಮಿ ಅವರು.

ಕನಕಪುರದ ಎಷ್ಟು ದಲಿತ ಕುಟುಂಬಗಳ ಹಾಳು ಮಾಡಿದ್ದೀರಿ ನೀವು. ಆ ಜನ ಕಣ್ಣಲ್ಲಿ ನೀರು ಹಾಕಿದ್ದನ್ನು ನಾನು ನೋಡಿದ್ದೇನೆ. ಕುಮಾರಸ್ವಾಮಿ ರೈತನ ಮಗ ಅಲ್ಲ ಎಂದಿದ್ದಾರೆ ಅವರು. ಫ್ಯಾಂಟ್ ತೆಗೆದು ಪಂಚೆ ಹಾಕಿದ್ರೆ ರೈತ ಅಲ್ಲ ಎಂದು ಹೇಳಿದ್ದಾರೆ. ಬನ್ನಿ, ಬಿಡದಿಗೆ ಬಂದು ನೋಡಿ. 20 ಟನ್ ಕೊಬ್ಬರಿ ಬೆಳೆದಿದ್ದೇನೆ. ತೆಂಗು, ಬಾಳೆ, ಅಡಕೆಯಲ್ಲಿ 50 ಲಕ್ಷ ರೂಪಾಯಿ ರೈತನಾಗಿ ಸಂಪಾದನೆ ಮಾಡಿದ್ದೇನೆ. ನಿಮ್ಮಿಂದ ಇದು ಸಾಧ್ಯವೇ? ಎಂದು ಸಚಿವರು ಟಾಂಗ್ ಕೊಟ್ಟರು.

ಚನ್ನಪಟ್ಟಣಕ್ಕೆ ಕುಮಾರಸ್ವಾಮಿ ಮತ್ತು ದೇವೇಗೌಡರು ಮಾಡಿದ್ದಾರೆ ಎಂದು ಕೇಳುತ್ತಿದ್ದಾರೆ. ದೇವೇಗೌಡರ ಕಾಲದಲ್ಲಿ ಇಗ್ಗಲೂರು ಜಲಾಶಯ ಕಟ್ಟಲು ಹೋದರು. ಕೆಲವರು ಆಗಲ್ಲ ಎಂದು ಹೇಳಿದರು. ಆದರೆ, ದೇವೇಗೌಡರು ಪಟ್ಟು ಹಿಡಿದು ಆ ಯೋಜನೆಯನ್ನು ಕಾರ್ಯಗತ ಮಾಡಿದರು. ಇವತ್ತು ಈ ನೆಲಕ್ಕೆ ಆ ಜಲಾಶಯ ಜೀವನಾಡಿ ಆಗಿದೆ ಎಂದು ಕುಮಾರಸ್ವಾಮಿ ಅವರು ಡಿಕೆಶಿಗೆ ತಿರುಗೇಟು ಕೊಟ್ಟರು.

ಚನ್ನಪಟ್ಟಣದಲ್ಲಿ ಕೆರೆಗಳನ್ನು ತುಂಬಿಸುವ ಕೆಲಸ ಕಾಂಗ್ರೆಸ್ ಸರ್ಕಾರದಿಂದ ಆಗಿಲ್ಲ. ನಾನು, ಯಡಿಯೂರಪ್ಪ, ಬೊಮ್ಮಾಯಿ ಸಿಎಂ ಆಗಿದ್ದಾಗ ಕೆರೆಗಳನ್ನು ತುಂಬಿಸಲಾಯಿತು. ಯೋಗೇಶ್ವರ್ ಕೂಡ ಮಂತ್ರಿಯಾಗಿ ಕೆಲಸ ಮಾಡಿದರು. ಕಾಂಗ್ರೆಸ್ ನವರು ಏನೂ ಮಾಡಿಲ್ಲ ಎಂದು ಅವರು ಕಿಡಿಕಾರಿದರು.

ರಾಜ್ಯದಲ್ಲಿ ನಿಮ್ಮ ಆಡಳಿತ, ನಿರ್ವಹಣೆ ಕೆಟ್ಟದಾಗಿದೆ. ಗ್ಯಾರಂಟಿ ಎಂದು ಕೊಟ್ಟಿದ್ದೀರಿ. ಯಾರಿಗೆ ಲಾಭವಾಗಿದೆ ಅದರಿಂದ, ಒಂದು ಕೈಯ್ಯಲ್ಲಿ ಕೊಟ್ಟು ಹತ್ತು ಕೈಗಳಲ್ಲಿ ಕಿತ್ತುಕೊಳ್ಳುತ್ತಿದ್ದಾರೆ. ರಾಜ್ಯದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಎಷ್ಟಾಗಿದೆ‌? ರೈತ ಟಿಸಿ ದರ ಎಷ್ಟಾಗಿದೆ? ಸರಣಿ ಹಗರಣಗಳ ರೀತಿಯಲ್ಲಿ ಸರಣಿ ಬೆಲೆ ಏರಿಕೆ ಮಾಡಿದ್ದೀರಿ. ರೈತರಿಗೆ ಆದಾಯ ಇಲ್ಲ. ರೈತರಿಗೆ ಏನು ಕೊಟ್ಟಿದ್ದೀರಿ? ಬರೀ ಸುಳ್ಳು ಹೇಳಿಕೊಂಡು ತಿರುಗುತ್ತಿದ್ದೀರಿ ಎಂದು ಕುಮಾರಸ್ವಾಮಿ ಅವರು ಆಕ್ರೋಶ ವ್ಯಕ್ತಪಡಿಸಿದರು.

ದಲಿತರ ಬಗ್ಗೆ ಇವರು ಚರ್ಚೆ ಮಾಡ್ತಿದ್ದಾರೆ. ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಹಣ ದರೋಡೆ ಮಾಡಿದ್ದಾರೆ. ಹಣ ದೋಚಿರೋ ಸಿದ್ದರಾಮಯ್ಯ, ಡಿಕೆಶಿ ಇಲ್ಲಿ ಬಂದು ದಲಿತರ ಬಗ್ಗೆ ಚರ್ಚೆ ಮಾಡ್ತೀರಾ? ಹೆಚ್ಡಿಕೆ ವಾಗ್ದಾಳಿ ನಡೆಸಿದರು.

Happy
Happy
0 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *