
ಮಂಗಳೂರು: ಸುರತ್ಕಲ್ ಠಾಣಾ ವ್ಯಾಪ್ತಿಯ ಮುಕ್ಕ ಪ್ರದೇಶದಲ್ಲಿ 85 ವರ್ಷದ ವೃದ್ಧೆಯ ಮೇಲೆ ನಡೆದ ದರೋಡೆ ಪ್ರಕರಣವನ್ನು ಪೊಲೀಸರು ಭೇದಿಸಿದ್ದು, ನಾಲ್ವರು ಆರೋಪಿಗಳನ್ನು ಬಂಧಿಸಿ ಸುಮಾರು 4.43 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ವಶಕ್ಕೆ ಪಡೆದಿದ್ದಾರೆ. ಇನ್ನೊಬ್ಬ ಆರೋಪಿ ತಲೆಮರೆಸಿಕೊಂಡಿದ್ದಾನೆ.



ದಿನಾಂಕ 03-12-2025 ರಂದು ಮಧ್ಯಾಹ್ನ ಸುಮಾರು 2.30ರ ವೇಳೆಗೆ ಮುಕ್ಕ, ಸಸಿಹಿತ್ಲು ರಸ್ತೆಯ ಜಯಲಕ್ಷ್ಮೀ ನಿವಾಸದಲ್ಲಿ ವಾಸವಾಗಿದ್ದ ಜಲಜ (85) ಅವರ ಮನೆಗೆ ಅಪರಿಚಿತರು ಬಂದು ಕುಡಿಯಲು ನೀರು ಕೇಳಿದ್ದಾರೆ. ಬಾಗಿಲು ತೆರೆಯದ ಹಿನ್ನೆಲೆಯಲ್ಲಿ ಆರೋಪಿತರು ಮನೆಯ ಹಂಚು ತೆಗೆದು ಒಳನುಗ್ಗಿ, ತುಳುವಿನಲ್ಲಿ ಜೀವ ಬೆದರಿಕೆ ಹಾಕಿ ಗೋದ್ರೇಜ್‌ನಲ್ಲಿದ್ದ ಸುಮಾರು 16 ಗ್ರಾಂ ಚಿನ್ನದ ಸರ, 20 ಗ್ರಾಂ ತೂಕದ ಎರಡು ಚಿನ್ನದ ಬಳೆಗಳು ಹಾಗೂ ಪರ್ಸ್‌ನಲ್ಲಿದ್ದ 14,000 ರೂ. ನಗದನ್ನು ದೋಚಿದ್ದಾರೆ.
ಈ ಕುರಿತು ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮ ಸಂಖ್ಯೆ 158/2025, ಕಲಂ 309(6) BNS ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಪಿಎಸ್‌ಐ ರಘುನಾಯಕ್ ಹಾಗೂ ರಾಘವೇಂದ್ರ ನಾಯ್ಕ್ ನೇತೃತ್ವದಲ್ಲಿ ತಂಡ ರಚಿಸಿ ಸಿಸಿಟಿವಿ ಪರಿಶೀಲನೆ ನಡೆಸಿದ ವೇಳೆ ಶೈನ್ ಎಚ್. ಪುತ್ರನ್ @ ಶಯನ್ @ ಶೈನ್ (21) ಎಂಬಾತನನ್ನು ವಶಕ್ಕೆ ಪಡೆಯಲಾಯಿತು.


ವಿಚಾರಣೆ ವೇಳೆ ಶೈನ್, ಜೈಸನ್ @ ಲೆನ್ಸನ್ ಕಾರ್ಕಳನೊಂದಿಗೆ ದರೋಡೆ ನಡೆಸಿರುವುದಾಗಿ ಒಪ್ಪಿಕೊಂಡಿದ್ದಾನೆ. ಕಳವಾದ ಚಿನ್ನವನ್ನು ಬೆಂಗಳೂರಿನಲ್ಲಿ ವಿನೋದ್ @ ಕೋತಿ @ ವಿನೋದ್ ಕುಮಾರ್ (33) ಹಾಗೂ ಗಿರೀಶ್ @ ಸೈಕಲ್ ಗಿರಿ (28) ಅವರಿಗೆ ಮಾರಾಟ ಮಾಡಿರುವುದಾಗಿ ತಿಳಿಸಿದ್ದಾನೆ. ಪೊಲೀಸರು ದಿನಾಂಕ 14-12-2025 ರಂದು ಬೆಂಗಳೂರಿನಲ್ಲಿ ಈ ಇಬ್ಬರನ್ನು ಬಂಧಿಸಿ, 4.43 ಲಕ್ಷ ರೂ. ಮೌಲ್ಯದ ಚಿನ್ನ, ದರೋಡೆಗೆ ಬಳಸಿದ ಮೋಟಾರ್ ಸೈಕಲ್, 3 ಮೊಬೈಲ್ ಫೋನ್‌ಗಳು ಹಾಗೂ 3,000 ರೂ. ನಗದನ್ನು ಮಹಜರ್ ಮೂಲಕ ವಶಪಡಿಸಿಕೊಂಡಿದ್ದಾರೆ.

ಇನ್ನೊಬ್ಬ ಆರೋಪಿ ಜೈಸನ್ @ ಲೆನ್ಸನ್ ಕಾರ್ಕಳ ಪರಾರಿಯಾಗಿದ್ದು, ಶೋಧ ಕಾರ್ಯ ಮುಂದುವರಿದಿದೆ. ಆರೋಪಿಗಳ ಪೈಕಿ ಶೈನ್ ಮೇಲೆ ಗಾಂಜಾ ಸೇವನೆ ಪ್ರಕರಣ, ವಿನೋದ್ ಹಾಗೂ ಗಿರೀಶ್ ಮೇಲೆ ಬೆಂಗಳೂರು ನಗರದಲ್ಲಿ ಕೊಲೆ, ಕೊಲೆಯತ್ನ, ದರೋಡೆ ಸೇರಿ ಅನೇಕ ಕ್ರಿಮಿನಲ್ ಪ್ರಕರಣಗಳು ದಾಖಲಾಗಿರುವುದು ತಿಳಿದುಬಂದಿದೆ.
ಬಂಧಿತ ಆರೋಪಿಗಳನ್ನು ದಿನಾಂಕ 15-12-2025 ರಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.
ಈ ಕಾರ್ಯಾಚರಣೆ ಮಾನ್ಯ ಸಹಾಯಕ ಪೊಲೀಸ್ ಆಯುಕ್ತ ಶ್ರೀ ಶ್ರೀಕಾಂತ್ ಕೆ ಅವರ ಮಾರ್ಗದರ್ಶನದಲ್ಲಿ, ಪೊಲೀಸ್ ನಿರೀಕ್ಷಕ ಪ್ರಮೋದ್ ಕುಮಾರ್ ಪಿ ನೇತೃತ್ವದಲ್ಲಿ ಸುರತ್ಕಲ್ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಯಶಸ್ವಿಯಾಗಿ ನಡೆಸಿದ್ದಾರೆ.

