
ಮಂಗಳೂರು: ಗೋವಾದಲ್ಲಿ ನಡೆದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಕಾಂತಾರ – ಚಾಪ್ಟರ್ 1 ಸಿನೆಮಾವನ್ನು ಹೊಗಳುವ ಭರದಲ್ಲಿ ದೈವವನ್ನು ದೆವ್ವ ಎಂದು ಕರೆದಿರುವ ಬಾಲಿವುಡ್ ನಟ ರಣವೀರ್ ಸಿಂಗ್ ವಿರುದ್ಧ ಕರಾವಳಿಯಲ್ಲಿ ಆಕ್ರೋಶ ವ್ಯಕ್ತವಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ಈ ಕುರಿತು ಭಾರಿ ಚರ್ಚೆಯಾಗುತ್ತಿದ್ದು, ಕೆಲವರು ಇದಕ್ಕೆಲ್ಲ ಅವಕಾಶ ಮಾಡಿಕೊಟ್ಟದ್ದು ರಿಷಬ್ ಶೆಟ್ಟಿ ಎಂದು ದೂಷಿಸುತ್ತಿದ್ದಾರೆ. ವೇದಿಕೆಯಲ್ಲಿ ದೈವಗಳನ್ನು ವಿಕೃತವಾಗಿ ಅನುಕರಣೆ ಮಾಡಿದ ನಟ ರಣ್‍ವೀರ್ ಸಿಂಗ್ ವಿರುದ್ಧ ದೈವಾರಾಧಕರು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.


ತನ್ನ ಮುಂಬರುವ ಧುರಂದರ್ ಚಿತ್ರದ ಪ್ರಚಾರಕ್ಕಾಗಿ ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ಬಂದಿದ್ದ ರಣವೀರ್ ಸಿಂಗ್ ಕಾಂತಾರದಲ್ಲಿ ರಿಷಬ್ ಶೆಟ್ಟಿಯವರ ಕ್ಲೈಮಾಕ್ಸ್ ದೃಶ್ಯವನ್ನು ಹೊಗಳುವ ಭರದಲ್ಲಿ ಚಾವುಂಡಿ ದೈವವನ್ನು ದೆವ್ವ (ಗೋಸ್ಟ್) ಎಂದು ಕರೆದಿದ್ದಾರೆ. ಮಾತ್ರವಲ್ಲದೆ ಆ ನಟನೆಯನ್ನು ತಾನೂ ಅಭಿನಯಿಸಿ ತೋರಿಸಿದ್ದಾರೆ. ಆದರೆ ಇದು ದೈವದ ಅಣಕದಂತೆ ಕಂಡಿರುವುದು ದೈವಾರಾಧಕರ ಆಕ್ರೋಶಕ್ಕೆ ಕಾರಣವಾಗಿದೆ.
ತುಳುನಾಡ ದೈವಾರಾಧನೆ ರಕ್ಷಣಾ ಚಾವಡಿ ಸಂಚಾಲಕ ಕಮಲಾಕ್ಷ ಗಂಧಕಾಡು ತೀವ್ರ ಅಸಮಾಧಾನ ಹೊರಹಾಕಿದ್ದಾರೆ. ತುಳುನಾಡಿನ ದೈವಗಳಿಗೆ ನಿರಂತರ ಅವಮಾನ ಮಾಡಲಾಗುತ್ತಿದೆ. ಮನಸ್ಸಿಗೆ ಬಹಳ ನೋವಾಗುತ್ತಿದೆ ಎಂದು ಅವರು ಮಾಧ್ಯಮಗಳ ಮುಂದೆ ಹೇಳಿಕೊಂಡಿದ್ದಾರೆ.

ಕಾರ್ಯಕ್ರಮದಲ್ಲಿ ರಿಷಬ್ ಶೆಟ್ಟಿ ಇದ್ದರೂ ಅದನ್ನು ವಿರೋಧಿಸದಿರುವುದು ಖಂಡನೀಯ. ರಣವೀರ್ ಸಿಂಗ್ ಮಂಗಳೂರಿನ ಕದ್ರಿ ಮಂಜುನಾಥನ ಸನ್ನಿಧಿಗೆ ಬಂದು ಕ್ಷಮೆ ಕೇಳಬೇಕು. ಈ ತುಳುನಾಡಿನ ಮಣ್ಣಿಗೆ ಶರಣಾಗಬೇಕು. ನಿರ್ದೇಶಕ ರಿಷಬ್ ಶೆಟ್ಟಿ ಕೂಡ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದಾರೆ.

ಕಾರ್ಯಕ್ರಮ ನಡೆಯುವಾಗ ರಿಷಬ್ ಶೆಟ್ಟಿ ಮುಂದಿನ ಸಾಲಿನಲ್ಲೇ ಕುಳಿತಿದ್ದರು. ರಣವೀರ್ ಅನುಕರಣೆಗೆ ಸ್ವತಃ ರಿಷಬ್ ಅವರೇ ನಕ್ಕಿದ್ದಾರೆ. ಬಾಲಿವುಡ್ ನಟನಿಗೆ ರಿಷಬ್ ಯಾಕೆ ಆಕ್ಷೇಪ ವ್ಯಕ್ತಪಡಿಸಲಿಲ್ಲ ಎಂದು ಸೋಷಿಯಲ್ ಮೀಡಿಯಾದಲ್ಲಿ ಅನೇಕರು ಪ್ರಶ್ನಿಸಿದ್ದಾರೆ.

