
ಮಂಗಳೂರು: ರಸ್ತೆಯಲ್ಲಿ ನಮಾಜ್ ನಡೆಸಿದವರ ಮೇಲೆ ಒಂದೇ ದಿನದಲ್ಲಿ ಬಿ ರಿಪೋರ್ಟ್ ಸಲ್ಲಿಕೆಯಾದಂತೆ ಸುಖಾಸುಮ್ಮನೆ ವಿಎಚ್ ಪಿ ಮುಖಂಡ ಶರಣ್ ಪಂಪ್ ವೆಲ್ ವಿರುದ್ಧ ಹಾಕಿದ್ದಕ್ಕೂ ಬಿ ರಿಪೋರ್ಟ್ ನೀಡಿ ಎಂದು ಆಗ್ರಹಿಸಿ ವಿಎಚ್ ಪಿ ಕದ್ರಿ ಸರ್ಕಲ್ ನಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿತು. ಬಜರಂಗದಳದ ಮುಖಂಡ ಪುನೀತ್ ಅತ್ತಾವರ ಮಾತನಾಡಿ, ಇನ್ನು ಮುಂದೆ ಯಾರಾದರೂ ರಸ್ತೆಯಲ್ಲಿ ನಮಾಜ್ ಮಾಡಿದರೆ ನಾವು ಮಸೀದಿಯ ಮುಂಭಾಗವೇ ಹನುಮಾನ್ ಚಾಲೀಸ ಪಠಣ ಮಾಡಿಯೇ ಮಾಡುತ್ತೇವೆ.


ಅಲ್ಲದೆ ನಾವು ದಂಡದ ಬದಲು ಧ್ವಜ ಹಿಡಿಯುತ್ತೇವೆಂದು ಎಚ್ಚರಿಕೆ ನೀಡಿದರು. ಪ್ರಶಾಂತ್ ಪೂಜಾರಿ ಹತ್ಯೆ ನಡೆಸಿದವರು ಉಳಿದುಕೊಂಡದ್ದು, ಎನ್ಐಎ ಶಂಕಿತ ಭಯೋತ್ಪಾದಕನನ್ನು ಬಂಧಿಸಿದ್ದು, ಬ್ಯಾನ್ ಸಂದರ್ಭ ಪಿಎಫ್ಐ ಸಂಘಟನೆಯ ಪ್ರಭಾವಿ ಮುಖಂಡ ಅಡಗಿ ಕುಳಿತುಕೊಂಡದ್ದು ರಸ್ತೆಯಲ್ಲಿ ನಮಾಜ್ ಮಾಡಿದ ಮಸೀದಿಯಿರುವ ಹತ್ತಿರದ ಫ್ಲ್ಯಾಟ್ ಗಳಲ್ಲಿಯೇ. ಆದ್ದರಿಂದ ದೇಶವಿರೋಧಿ ಕೃತ್ಯಗಳಲ್ಲಿ ತೊಡಗಿಕೊಂಡವರು ಆ ಮಸೀದಿ ಅಕ್ಕಪಕ್ಕದಲ್ಲಿದ್ದಾರೆಂಬ ಶಂಕೆಯಿದೆ. ಅವರ ಮೇಲೆಯೂ ಕ್ರಮ ಆಗಲಿ ಎಂದು ಪುನೀತ್ ಅತ್ತಾವರ ಆಗ್ರಹಿಸಿದರು.
ಬಿಜೆಪಿ ಮುಖಂಡ ಜಗದೀಶ್ ಶೇಣವ ಮಾತನಾಡಿ, ರಸ್ತೆಯಲ್ಲಿ ನಮಾಜ್ ಮಾಡಿದವರ ಮೇಲೆ ನಾವು ದೂರು ದಾಖಲಿಸಿಲ್ಲ. ಪೊಲೀಸರೇ ಸುಮೋಟೊ ಕೇಸ್ ದಾಖಲಿಸಿದ್ದರು. ಆ ಬಳಿಕ ಒತ್ತಡ ಬಂದಾಗ ಬಿ ರಿಪೋರ್ಟ್ ನೀಡಲಾಗುತ್ತದೆ. ಇಡೀ ದೇಶದಲ್ಲಿ ಒಂದೇ ದಿನದಲ್ಲಿ ಬಿ ರಿಪೋರ್ಟ್ ನೀಡಿರುವ ಪ್ರಕರಣ ಇದೇ ಮೊದಲ ಬಾರಿ ಮಂಗಳೂರಿನಲ್ಲಿ ಆಗಿದೆ. ಇದರೊಂದಿಗೆ ಶರಣ್ ಪಂಪ್ ವೆಲ್ ಮೇಲೆ ಜಾಮೀನು ರಹಿತ ಕೇಸ್ ದಾಖಲಾಗಿದೆ. ತಪ್ಪು ಮಾಡಿದ್ದು ಯಾರೋ ಶಿಕ್ಷೆ ಯಾರಿಗೋ. ಈಗಿನ ಪೊಲೀಸ್ ಕಮಿಷನರ್ ಗೆ ಮಂಗಳೂರಿನ ಹಿಂದೂ ಸಂಘಟನೆಯ ಬಗ್ಗೆ ಅರಿವಿಲ್ಲ. ಈ ಪ್ರಕರಣ ಖಂಡಿತಾ ಇಲ್ಲಿಗೆ ನಿಲ್ಲುವುದಿಲ್ಲ. ರಸ್ತೆಯಲ್ಲಿ ನಮಾಜ್ ಮಾಡಿದರೆ ಉತ್ತರಪ್ರದೇಶ, ಮಧ್ಯಪ್ರದೇಶದಲ್ಲಿ ಏನಾಗುತ್ತದೋ ಅದೇ ಪರಿಸ್ಥಿತಿ ಇಲ್ಲಿಯೂ ಆಗುತ್ತದೆ. ಜಾಗೃತ ಹಿಂದೂ ಸಮಾಜ ಭೋರ್ಗರೆದರೆ ಏನಾಗುತ್ತದೆ ಎಂಬುದು ಪೊಲೀಸ್ ಕಮಿಷನರ್ ಗೆ ಇನ್ನೂ ಗೊತ್ತಿಲ್ಲ. ಆದ್ದರಿಂದ ತಕ್ಷಣ ಶರಣ್ ಪಂಪ್ ವೆಲ್ ಮೇಲೂ ಬಿ ರಿಪೋರ್ಟ್ ಹಾಕಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

