
ನವದೆಹಲಿ : ಪಹಲ್ಗಾಂ ನಲ್ಲಿ ಉಗ್ರರ ದಾಳಿಗೆ ಪ್ರತೀಕಾರವಾಗಿ ಈಗಾಗಲೇ ಭಾರತ ಪಾಕಿಸ್ತಾನದ ಮೇಲೆ ದಾಳಿ ಮಾಡಿ ಅನೇಕ ಉಗ್ರರನ್ನು ಹತ್ಯೆಗೈದಿದೆ. ಇದೀಗ ನಿನ್ನೆ ಸಂಜೆ 5 ಗಂಟೆಯಿಂದಲೇ ಪಾಕಿಸ್ತಾನ ಭಾರತಕ್ಕೆ ಕರೆ ಮಾಡಿ ಕದನ ವಿರಾಮಕ್ಕೆ ಮನವಿ ಮಾಡಿತ್ತು. ಈ ಹಿನ್ನೆಲೆಯಲ್ಲಿ ಇಂದು ಭಾರತ ಮತ್ತು ಪಾಕಿಸ್ತಾನದ ನಡುವೆ ಕದನ ವಿರಾಮ ಘೋಷಣೆಯಾಗಿದೆ. ಇದರ ಮಧ್ಯ 2019ರಲ್ಲಿ ನಡೆದ ಪುಲ್ವಾಮ ದಾಳಿಯ ಕುರಿತು ಪಾಕಿಸ್ತಾನದ ವಾಯುಪಡೆಯ ಮುಖ್ಯಸ್ಥ ಸ್ಪೋಟಕವಾದ ಹೇಳಿಕೆ ನೀಡಿದ್ದಾರೆ.


ಪುಲ್ವಾಮಾ ಭಯೋತ್ಪಾದಕ ದಾಳಿ ನಮ್ಮ ಯುದ್ಧ ತಂತ್ರದ ಭಾಗ ಎಂದು ಇದೀಗ ಪಾಕಿಸ್ತಾನ ಒಪ್ಪಿಕೊಂಡಿದೆ. ಪಾಕಿಸ್ತಾನ ಇದೀಗ ತನ್ನ ಹಳೆಯ ಪುಲ್ವಾಮಾ ಭಯೋತ್ಪಾದಕ ದಾಳಿ ಕೃತ್ಯವನ್ನ ಒಪ್ಪಿಕೊಂಡಿದೆ. ಪುಲ್ವಾಮಾ ದಾಳಿ ತನ್ನದೇ ಕೃತ್ಯ ಎಂದು ಪಾಕ್ ವಾಯು ಪಡೆಯ ಮುಖ್ಯಸ್ಥ ಸುದ್ದಿಗೋಷ್ಠಿಯಲ್ಲಿ ಒಪ್ಪಿಕೊಂಡಿರುವ ವಿಡಿಯೋ ಹರಿದಾಡುತ್ತಿದೆ.
ಪುಲ್ವಾಮಾದಲ್ಲಿ ಸ್ಟಾಟರ್ಜಿಕ್ ಬ್ರಿಲಿಯನ್ಸ್ ತೋರಿಸಿದ್ದೇವೆ ಅಂದರೆ ಆ ಭಯೋತ್ಪಾದಕ ದಾಳಿ ನಮ್ಮ ಯುದ್ಧತಂತ್ರದ ಪ್ರತಿಭೆಯ ಭಾಗ ಎಂದು ಅಂತಾರಾಷ್ಟ್ರೀಯ ಪತ್ರಕರ್ತರ ಮುಂದೆಯೇ ಪಾಕ್ ಬಾಯಿಬಿಟ್ಟಿದೆ. ಫೆ.14, 2019ರಲ್ಲಿ ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ಆತ್ಮಹತ್ಯಾ ಬಾಂಬರ್‌ನಿಂದ ಭಯೋತ್ಪಾದಕ ದಾಳಿಯನ್ನು ನಡೆಸಲಾಗಿತ್ತು.


ಜೈಶ್-ಎ-ಮೊಹಮ್ಮದ್ ಉಗ್ರ ಸಂಘಟನೆಯ ಆದಿಲ್ ಅಹ್ಮದ್ ದಾರ್ ಎಂದು ಗುರುತಿಸಲಾದ ಆತ್ಮಹತ್ಯಾ ಬಾಂಬರ್ ತನ್ನ ವಾಹನವನ್ನು ಸಿಆರ್‌ಪಿಎಫ್ ಬೆಂಗಾವಲು ಪಡೆಯ ಬಸ್‌ಗೆ ಡಿಕ್ಕಿ ಹೊಡೆದು ಸ್ಫೋಟಿಸಿದ್ದ.ಆ ಸ್ಫೋಟದಲ್ಲಿ 40 ಸಿಆರ್‌ಪಿಎಫ್ ಯೋಧರು ಹುತಾತ್ಮರಾಗಿದ್ದರು. ಇದೀಗ ಪಾಕಿಸ್ತಾನವೇ ಆ ದಾಳಿಯನ್ನು ಒಪ್ಪಿಕೊಂಡಿದೆ.
