
ಮೂಡುಬಿದಿರೆ: ಮೂಡುಬಿದಿರೆಯ ‘ಸಿಂಗಮ್’ ಎಂದೇ ಖ್ಯಾತರಾಗಿರುವ ಇನ್ಸ್ಪೆಕ್ಟರ್ ಸಂದೇಶ್ ಪಿ.ಜಿ. ಅವರ ನೇತೃತ್ವದಲ್ಲಿ ನಡೆದ ಸಿನಿಮೀಯ ಶೈಲಿಯ ಕಾರ್ಯಾಚರಣೆಯಲ್ಲಿ ಬಂಟ್ವಾಳದ ರೌಡಿಶೀಟರ್ ಒಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.ಬಂಧಿತ ಆರೋಪಿಯನ್ನು ಕಲ್ಲಡ್ಕ ನಿವಾಸಿ ತೌಸೀಫ್ ಯಾನೆ ಅಪ್ಪಿ ಎಂದು ಗುರುತಿಸಲಾಗಿದೆ. ಆರೋಪಿಯಿಂದ ಸುಮಾರು ₹50,000 ಮೌಲ್ಯದ 10 ಗ್ರಾಂ ಎಂಡಿಎಂಎ ಮಾದಕವಸ್ತು ಹಾಗೂ ಒಂದು ತಲವಾರು ವಶಪಡಿಸಿಕೊಳ್ಳಲಾಗಿದೆ.ಆರೋಪಿ ತಲವಾರು ಇಟ್ಟುಕೊಂಡು ಕಾರಿನಲ್ಲಿ ಸಂಚರಿಸುತ್ತಿದ್ದಾನೆ ಎಂಬ ಖಚಿತ ಮಾಹಿತಿಯ ಮೇರೆಗೆ ಇನ್ಸ್ಪೆಕ್ಟರ್ ಸಂದೇಶ್ ಪಿ.ಜಿ. ಅವರ ನೇತೃತ್ವದ ಪೊಲೀಸ್ ತಂಡ ಕಾರ್ಯಾಚರಣೆ ಆರಂಭಿಸಿತು. ಆರೋಪಿಯ ಕಾರು ಕೊಡಂಗಲ್ಲು ಸಮೀಪ ಇರುವ ಮಾಹಿತಿ ಲಭಿಸಿದ ಕೂಡಲೇ ಪೊಲೀಸರು ಆತನನ್ನು ಪತ್ತೆಹಚ್ಚಿದರು.



ಪೊಲೀಸರನ್ನು ಕಂಡ ಆರೋಪಿಯು ಕಾರನ್ನು ಹಿಂದಕ್ಕೆ ಚಲಿಸಿ ಪರಾರಿಯಾಗಲು ಯತ್ನಿಸಿದ್ದಾನೆ. ಬಳಿಕ ಪೊಲೀಸರು ಕಾರನ್ನು ಸುತ್ತುವರಿದಾಗಲೂ ಆತ ಕಾರಿನಿಂದ ಇಳಿಯದೆ ಪೊಲೀಸರಿಗೆ ವಿರುದ್ಧವಾಗಿ ವರ್ತಿಸಿದ್ದಾನೆ. ಆದರೆ ಇನ್ಸ್ಪೆಕ್ಟರ್ ಸಂದೇಶ್ ಅವರ ತಂಡದ ಹರಸಾಹಸದಿಂದ ಸಿನಿಮೀಯ ಶೈಲಿಯಲ್ಲಿ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾದರು.ಈ ಕಾರ್ಯಾಚರಣೆಯನ್ನು ಸ್ಥಳೀಯರು ಕುತೂಹಲದಿಂದ ವೀಕ್ಷಿಸಿದ್ದು, ಕೆಲವರು ಪೊಲೀಸರಿಗೆ ಸಹಕಾರ ನೀಡಿದರು. ಬಳಿಕ ಆರೋಪಿಯನ್ನು ಕಾರಿನಿಂದ ಇಳಿಸಿ ಪೊಲೀಸ್ ವಶಕ್ಕೆ ಪಡೆದು ಠಾಣೆಗೆ ಕರೆತರಲಾಯಿತು. ಪರಿಶೀಲನೆ ವೇಳೆ ಕಾರಿನೊಳಗಿಂದ ಎಂಡಿಎಂಎ ಮಾದಕವಸ್ತು ಹಾಗೂ ತಲವಾರು ಪತ್ತೆಯಾಗಿದೆ.
ಆರೋಪಿಯ ವಿರುದ್ಧ ಮಾದಕ ವಸ್ತು ಕಾಯ್ದೆ ಹಾಗೂ ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಬಂಧಿತ ತೌಸೀಫ್ ವಿರುದ್ಧ ಈಗಾಗಲೇ ಬಂಟ್ವಾಳ ಠಾಣೆಯಲ್ಲಿ ಐದು ಪ್ರಕರಣಗಳು ದಾಖಲಾಗಿದ್ದು, ಆತ ರೌಡಿಶೀಟರ್ ಆಗಿದ್ದಾನೆ.ಈ ಕಾರ್ಯಾಚರಣೆಯಲ್ಲಿ ಮೂಡುಬಿದಿರೆ ಠಾಣೆಯ ಅಪರಾಧ ವಿಭಾಗದ ಸಿಬ್ಬಂದಿಗಳಾದ ಅಕೀಲ್ ಅಹ್ಮದ್, ಮುಹಮ್ಮದ್ ಇಕ್ಬಾಲ್, ಮುಹಮ್ಮದ್ ಹುಸೈನ್, ನಾಗರಾಜ್, ದೇವರಾಜ್ ಹಾಗೂ ಚಂದ್ರಹಾಸ ರೈ ಭಾಗವಹಿಸಿದ್ದರು.



