
ಮಂಗಳೂರು: ಹಿಂದಿನ ಅಪರಾಧ ಕೃತ್ಯವೊಂದನ್ನು ಉಲ್ಲೇಖಿಸಿ ಪಹಲ್ಗಾಂ ಭಯೋತ್ಪಾದಕ ದಾಳಿಯನ್ನು ಸಮರ್ಥಿಸಿಕೊಂಡಿದ್ದ ಮಂಗಳೂರಿನ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.


2023ರಲ್ಲಿ ಮಹಾರಾಷ್ಟ್ರದ ಪಾಲ್ಗರ್ ರೈಲ್ವೆ ನಿಲ್ದಾಣದಲ್ಲಿ ಮೂವರು ಮುಸ್ಲಿಮರನ್ನು ಹತ್ಯೆ ಮಾಡಿದ್ದ ಚೇತನ್ ಸಿಂಗ್ ಎಂಬಾತನಿಗೆ ಶಿಕ್ಷೆಯಾಗಿದ್ದರೆ ಇಂದು ಕಾಶ್ಮೀರದಲ್ಲಿ ಇಂತಹ ಕೃತ್ಯ ನಡೆಯುತ್ತಿರಲಿಲ್ಲ ಎಂದು ಪ್ರಚೋದನಕಾರಿಯಾಗಿ ಪೋಸ್ಟ್ ಮಾಡುವ ಮೂಲಕ ಪಹಲ್ಗಾಮ್ ಉಗ್ರ ದಾಳಿಯನ್ನು ಈತ ಸಮರ್ಥಿಸಿಕೊಂಡಿದ್ದ.ನಿಚ್ಚು ಮಂಗಳೂರು ಎಂಬ ಬಳಕೆದಾರ ಫೇಸ್‌ಬುಕ್‌ನಲ್ಲಿ ಇಂಥ ಪ್ರಚೋದನಕಾರಿ ಪೋಸ್ಟ್ ಹಾಕಿದ್ದಕ್ಕಾಗಿ ಉಳ್ಳಾಲ ತಾಲೂಕಿನ ನಿವಾಸಿ ಸತೀಶ್ ಕುಮಾರ್ ಎಂಬವರು ನೀಡಿದ ದೂರಿನ ಆಧಾರದ ಮೇಲೆ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಸಾರ್ವಜನಿಕ ಶಾಂತಿಗೆ ಭಂಗ ತರುವ ಉದ್ದೇಶದಿಂದ ಕಾಶ್ಮೀರದಲ್ಲಿ ನಡೆದ ಭಯೋತ್ಪಾದಕ ಘಟನೆಯ ಕುರಿತು ಪ್ರಚೋದನಕಾರಿ ಮತ್ತು ಆಕ್ಷೇಪಾರ್ಹ ಹೇಳಿಕೆ ನೀಡಲಾಗಿದೆ ಎಂದು ದೂರಲಾಗಿದೆ. ದೂರುದಾರರು ಪೋಸ್ಟ್‌ನ ಸ್ಕ್ರೀನ್‌ಶಾಟ್‌ಗಳನ್ನು ಮತ್ತು ಬಳಕೆದಾರರ ಪ್ರೊಫೈಲ್ ಅನ್ನು ಸಾಕ್ಷ್ಯಕ್ಕಾಗಿ ಸಲ್ಲಿಸಿದ್ದಾರೆ. ಭಾರತೀಯ ನ್ಯಾಯ ಸಂಹಿತಾ (BNS), 2023 ರ ಸೆಕ್ಷನ್ 192 ಮತ್ತು 353(1)(b) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ತನಿಖೆ ಮುಂದುವರೆದಿದೆ.