
ಮಂಗಳೂರು: ಕಳೆದ ಕೆಲವು ದಿನಗಳಿಂದ ನೆಲ್ಲಿದಡಿ ಗುತ್ತು ವಿವಾದ ದ.ಕ ಜಿಲ್ಲೆಯಲ್ಲಿ ಹೊಸ ಸಂಚಲನವನ್ನು ಸೃಷ್ಟಿಸುತ್ತಿದೆ. ಈ ಜಾಗದ ಕಾಂತೇರಿ ಜುಮಾದಿ ದೈವಕ್ಕೆ ಸಂಕ್ರಾಂತಿ ಪೂಜೆ ಸಲ್ಲಿಸಲು ಎಮ್‌ಎಸ್‌ಇಝಡ್ ಅವಕಾಶ ನೀಡುತ್ತಿಲ್ಲ ಎಂಬ ವಿಚಾರ ತುಳುನಾಡಿನ ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು. ತುಳುವರ ನಂಬಿಕೆ, ಆಚಾರ ವಿಚಾರಗಳಿಗೆ ಎಮ್‌ಎಸ್‌ಇಝಡ್ ಅಧಿಕಾರಿಗಳು ಧಕ್ಕೆ ತರುತ್ತಿದ್ದಾರೆ ಎಂಬುದಾಗಿ ಆಕ್ರೋಶ ಕೇಳಿ ಬಂದಿತ್ತು. ಇದೀಗ ಈ ವಿವಾದ ಸುಖಾಂತ್ಯ ಕಂಡಿದೆ.


ದ.ಕ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ನೇತೃತ್ವದಲ್ಲಿ ಸಭೆ ನಡೆದಿದ್ದು, ಗುತ್ತಿನ ಮನೆಯವರು, ಎಮ್‌ಎಸ್‌ಇಝಡ್ ಅಧಿಕಾರಿಗಳು ಈ ಸಭೆಯಲ್ಲಿ ಭಾಗವಹಿಸಿದ್ದರು. ಈ ಸಂದರ್ಭ ಜನವರಿ ಹಾಗೂ ಫೆಬ್ರವರಿ ತಿಂಗಳಲ್ಲಿ ನೀವು ದೈವದ ಆಚರಣೆ ಮಾಡಿಲ್ಲವೇ? ಈಗ ಆಗಿರುವ ತೊಂದರೆ ಏನು? ದಿಢೀರ್ ಆಗಿ ಸಮಸ್ಯೆ ಏಕೆ ಉದ್ಭವಿಸಿತು? ಎಂದು ಗುತ್ತಿನ ಮನೆಯವರಲ್ಲಿ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಕೇಳಿದ್ದಾರೆ. ಇದಕ್ಕೆ ಉತ್ತರಿಸಿದ ಗುತ್ತಿನಮನೆಯವರು, ಸಂಕ್ರಾಂತಿ ಆಚರಣೆಗೆ ತೊಂದರೆ ಆಗಿಲ್ಲ. ಈ ಬಾರಿ ಅನುಮತಿ ಕೇಳಿದಾಗ ಎಂಎಸ್‌ಇಜೆಡ್ ಅಧಿಕಾರಿಗಳು ಮುಂದೆ ಚೆನ್ನೈ ವಿಭಾಗದಲ್ಲೇ ಪರ್ಮಿಷನ್ ಕೇಳಬೇಕು ಎಂದರು. ಅವರ ಈ ಹೇಳಿಕೆಯಿಂದಲೇ ಗೊಂದಲ ಸೃಷ್ಟಿಯಾಗಿದೆ ಎಂದು ಹೇಳಿದರು.
ಸಭೆಯಲ್ಲಿ ಶ್ರೀಕಾಂತ್ ಶೆಟ್ಟಿ ಮಾತನಾಡಿ, ಅಲ್ಲಿ ರಸ್ತೆ ಇದ್ದರೂ, ಒಳಗೆ ಹೋಗಲು ಬಿಡುವುದಿಲ್ಲ. ಪ್ರತಿ ಸಲ ಅನುಮತಿ ಕೇಳುವಂತಹ ಪರಿಸ್ಥಿತಿ ಎದುರಾಗಿದೆ. ಹೀಗೆ ಆಗಬಾರದು ಎಂದು ಹೇಳಿದರು. ಇನ್ನು ಸಂಸದ ಚೌಟ ಅವರು ಮಾತನಾಡಿ ನಮಗೆಲ್ಲ ದೈವಾರಾಧನೆಗೆ ಅಡ್ಡಿಯಾಗಬಾರದೆಂಬ ಆಶಯ ಇದ್ದು, ಈಗಿರುವ ಸಮಸ್ಯೆ ಪರಿಹಾರವಾಗಲೇಬೇಕು. ಶಾಶ್ವತ ಪರಿಹಾರಕ್ಕೆ ವ್ಯವಸ್ಥೆ ಮಾಡುವಂತೆ ಸೂಚಿಸಿದರು.

