
ಬೆಂಗಳೂರು: ನಾಗರಿಕರ ಬಹುದಿನಗಳ ಅಪೇಕ್ಷೆಯಂತೆ ಕೊನೆಗೂ ನಂದಿನಿ ಉತ್ಪನ್ನಗಳಿಗೆ ದೋಸೆ ಹಾಗೂ ಇಡ್ಲಿ ಹಿಟ್ಟು ಹೊಸ ಸೇರ್ಪಡೆಯಾಗಿದ್ದು, ರೆಡಿಮೇಡ್ ದೋಸೆ ಹಾಗೂ ಇಡ್ಲಿ ಹಿಟ್ಟು ಇಂದಿನಿಂದ ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ.


ಕರ್ನಾಟಕ ಹಾಲು ಒಕ್ಕೂಟವು ನಂದಿನಿ ಬ್ರ್ಯಾಂಡ್ ಅಡಿಯಲ್ಲಿ ಇಡ್ಲಿ ಮತ್ತು ದೋಸೆ ಹಿಟ್ಟನ್ನು ಬಿಡುಗಡೆ ಮಾಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇಂದು ಬೆಂಗಳೂರಿನ ಕಾವೇರಿ ನಿವಾಸದಲ್ಲಿ ಬಿಡುಗಡೆ ಮಾಡಿದ್ದು, ಹಾಲು, ಮೊಸರಿನಂತೆ ಇನ್ಮುಂದೆ ಗಾಹಕರಿಗೆ ನಂದಿನಿ ವೇ ಪ್ರೋಟಿನ್ ಆಧಾರಿತ ಇಡ್ಲಿ ಮತ್ತು ದೋಸೆ ಹಿಟ್ಟು ದೊರೆಯಲಿದೆ.
ನಂದಿನಿ ಬ್ರ್ಯಾಂಡ್‌ನ ಪ್ರಿಯರಿಗೆ ಇಂದಿನಿಂದಲೇ ನಂದಿನಿ ಇಡ್ಲಿ, ದೋಸೆ ಹಿಟ್ಟು ಲಭ್ಯವಾಗಲಿದೆ. ಕರ್ನಾಟಕ ರಾಜ್ಯದ ಜನತೆಗೆ ಈವರೆಗೆ ಮನೆ ಬಾಗಿಲಿಗೆ ನಂದಿನಿ ಬ್ರ್ಯಾಂಡ್‌ನ ಹಾಲು ಮೊಸರು ಬರುತ್ತಿದ್ದ ಮಾದರಿಯಲ್ಲಿಯೇ ಇನ್ನು ಮುಂದೆ ಇಡ್ಲಿ, ದೋಸೆ ಹಿಟ್ಟು ಕೂಡ ಬರಲಿದೆ. ಹೀಗಾಗಿ, ರಾಜ್ಯದ ಎಲ್ಲ ನಗರ, ಪಟ್ಟಣಗಳ ಜನರು ಬೆಳಗ್ಗಿನ ತಿಂಡಿ ಬಗ್ಗೆ ಚಿಂತೆ ಮಾಡುವ ಅಗತ್ಯವೇ ಇರುವುದಿಲ್ಲ. ಬೆಳಗ್ಗೆ ಇಡ್ಲಿ ಮಾಡಬೇಕೆಂದರೆ ಹಿಂದಿನ ದಿನದ ರಾತ್ರಿ ಎಲ್ಲಾ ರೆಡಿ ಮಾಡಿಕೊಳ್ಳಬೇಕು. ಆದ್ರೆ, ಇದೀಗ ರೆಡಿಮೆಡ್ ಬರುತ್ತಿರುವುದರಿಂದ ಯಾವುದೇ ಚಿಂತಿಸುವ ಅವಶ್ಯವೇ ಇಲ್ಲ. ಹಾಲು, ಮೊಸರಿನಂತೆ ಓಡಿ ಹೋಗಿ ಇಟ್ಟು ಖರೀದಿಸಿ ತಂದು ದೋಸೆ, ಇಡ್ಲಿ ಮಾಡಿಕೊಳ್ಳಬಹುದು.


ಪ್ರಯೋಗಿಕವಾಗಿ ಬೆಂಗಳೂರು ನಗರದಲ್ಲಿ ಈ ದೋಸೆ, ಇಡ್ಲಿ ಹಿಟ್ಟು ಮಾರುಕಟ್ಟೆಗೆ ಪರಿಚಯಿಸಲಾಗುತ್ತಿದ್ದು, ಗ್ರಾಹಕರಿಗೆ ಕೈಗೆಟುವ ದರದಲ್ಲಿ ನೀಡಲಾಗುತ್ತಿದೆ. ದೋಸೆ ಮತ್ತು ಇಡ್ಲಿ ಹಿಟ್ಟಿನ 450 ಗ್ರಾಂ ಪ್ಯಾಕ್ಗೆ 40 ರೂ. ಹಾಗೂ 900 ಗ್ರಾಂ ಪ್ಯಾಕೇಟ್ಗೆ 80 ರೂಪಾಯಿ ದರ ನಿಗದಿ ಮಾಡಲಾಗಿದೆ.

ಆರಂಭದಲ್ಲಿ ಮಾರುಕಟ್ಟೆಗಳು ಹಾಗೂ ನಂದಿನಿ ಹಾಲಿನ ಕೇಂದ್ರಗಳಲ್ಲಿ ಇದೀಗ ಲಭ್ಯವಿದ್ದು, ಮುಂದಿನ ದಿನಗಳಲ್ಲಿ ಮನೆ, ಮೆನೆಗೆ ಹಾಲನ್ನು ತಲುಪಿಸುವ ಮಾದರಿಯಲ್ಲಿಯೇ ಇಡ್ಲಿ ಅಥವಾ ದೋಸೆ ಹಿಟ್ಟುಗಳನ್ನು ಕೂಡ ಸರಬರಾಜು ಮಾಡುವುದಕ್ಕೆ ಚಿಂತನೆ ಮಾಡಲಾಗಿದೆ. ಇನ್ನು ಕೆಎಂಎಫ್ ಬಿಡುಗಡೆ ಮಾಡಿರುವ ಈ ಇಡ್ಲಿ, ದೋಸೆ ಹಿಟ್ಟು ವೇ ಪ್ರೋಟೀನ್ ಆಧಾರಿತವಾಗಿದೆ. ಆರೋಗ್ಯಕ್ಕೂ ಉತ್ತಮ ಎಂದು ಹೇಳಲಾಗುತ್ತಿದೆ. ಇನ್ನು ರುಚಿ ಹಾಗೂ ಸ್ವಾದದ ಬಗ್ಗೆ ಇನ್ನುಮುಂದೆ ಜನರ ಬಳಕೆಯಿಂದ ರೇಟಿಂಗ್ಸ್ ಬರಬೇಕಿದೆ