
ಮಧ್ಯವರ್ತಿಗಳ ಹಾವಳಿ ತಪ್ಪಿಸಿ, ಮಾವು ಬೆಳೆಗಾರರಿಗೆ ಉತ್ತಮ ದರ ದೊರಕುವಂತೆ ಮಾಡಲು ತೋಟಗಾರಿಕೆ ಇಲಾಖೆ ಶುಕ್ರವಾರದಿಂದ ಮೈಸೂರು ನಗರದ ಕುಪ್ಪಣ್ಣ ಪಾರ್ಕ್‌ನಲ್ಲಿ ಆಯೋಜಿಸಿರುವ ಮಾವು, ಹಲಸು ಮೇಳಕ್ಕೆ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ಮೈಸೂರು, ಮಂಡ್ಯ, ರಾಮನಗರ, ಉತ್ತರ ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ಮಹಾರಾಷ್ಟ್ರ ರಾಜ್ಯಗಳಲ್ಲಿ ಸಿಗುವಂತಹ ಮಾವಿನ ಹಣ್ಣುಗಳನ್ನು ಒಂದೇ ಸೂರಿನಡಿ ಮಾರಾಟ ಮಾಡಲಾಗುತ್ತಿದೆ. ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಮೈಸೂರಿಗೆ ಬರುತ್ತಿರುವುದರಿಂದ ಹೆಚ್ಚಿನ ವಹಿವಾಟು ನಡೆಯುವ ಸಾಧ್ಯತೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.



ಪ್ರತಿ ವರ್ಷದಂತೆ ಈ ಬಾರಿಯೂ ನಗರದ ಕುಪ್ಪಣ್ಣ ಪಾರ್ಕ್‌ನಲ್ಲಿ ಮಾವು ಮೇಳ ಆಯೋಜಿಸಲಾಗಿದ್ದು, ಒಂದೇ ಸೂರಿನಡಿ ತರಹೇವಾರಿ ಮಾವಿನ ಹಣ್ಣುಗಳನ್ನು ರೈತರಿಂದ ನೇರವಾಗಿ ಗ್ರಾಹಕರು ಖರೀದಿಸಲು ಅವಕಾಶ ಕಲ್ಪಿಸಲಾಗಿದೆ. ಮೇಳದಲ್ಲಿ ನೈಸರ್ಗಿಕವಾಗಿ ಹಾಗೂ ರೈತರೇ ನೇರವಾಗಿ ಮಾವು ತರುವುದರಿಂದ ಹೆಚ್ಚು ಬೆಲೆ ಇರುವುದಿಲ್ಲ. ಗ್ರಾಹಕರು ರೈತರನ್ನು ಪ್ರೋತ್ಸಾಹಿಸಲು ಮಾವು ಮೇಳಕ್ಕೆ ಆಗಮಿಸಿ ಖರೀದಿಸಿ ಎಂದು ಮಾಹಿತಿ ನೀಡಿದರು.
35 ಮಳಿಗೆ ವ್ಯವಸ್ಥೆ
ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಮಂಜುನಾಥ್ ಅಂಗಡಿ, ಮಾತನಾಡಿ, ಮಾವು ಮಾರಾಟ ಮತ್ತು ಪ್ರದರ್ಶನಕ್ಕೆ 35 ಮಳಿಗೆಗಳ ವ್ಯವಸ್ಥೆ ಮಾಡಲಾಗಿದೆ. ಕಳೆದ ಬಾರಿಯ ಮಾವು ಮೇಳದಲ್ಲಿ 150 ಟನ್ ಮಾವಿನ ಹಣ್ಣ ಮಾರಾಟವಾಗಿತ್ತು. ಈ ಬಾರಿ ಈ ಪ್ರಮಾಣ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದರು.


ನೈಸರ್ಗಿಕ ಹಣ್ಣುಗಳಿಗೆ ಆದ್ಯತೆ
ಮೇಳದಲ್ಲಿ ಭಾಗವಹಿಸುವ ರೈತರಿಗೆ ನೈಸರ್ಗಿಕವಾಗಿ ಹಣ್ಣಾದವುಗಳನ್ನು ತರುವಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಉತ್ಕೃಷ್ಟ ದರ್ಜೆಯ ವಿವಿಧ ತಳಿಯ ಹಣ್ಣುಗಳು ಮೇಳದಲ್ಲಿ ಗ್ರಾಹಕರಿಗೆ ದೊರೆಯು ವಂತೆ ಮಾಡಲಾಗಿದೆ.


ಶೇ.50ರಷ್ಟು ಫಸಲು ನಾಶ
ಮೈಸೂರು ಜಿಲ್ಲೆಯಲ್ಲಿ 3047 ಹೆಕ್ಟೇರ್‌ನಲ್ಲಿ ಮಾವು ಬೆಳೆಯಲಾಗುತ್ತಿದ್ದು, ಪ್ರತಿವರ್ಷ 30 ರಿಂದ 35 ಸಾವಿರ ಟನ್ ಮಾವು ಉತ್ಪಾದನೆಯಾಗುತ್ತಿತ್ತು. ಆದರೆ, ಈ ಬಾರಿ ವಾತಾವರಣದಲ್ಲಿನ ಉಷ್ಣತೆ ಹೆಚ್ಚಳ ಹಾಗೂ ಬಿಸಿ ಗಾಳಿಯ ಪರಿಣಾಮ ಮಾವಿನ ಹೂ ಉದುರಿದ್ದು ಶೇ.50 ರಷ್ಟು ಫಸಲು ನಾಶವಾಗಿದೆ ಎಂದು ತಿಳಿಸಿದರು.
ಮಾರುಕಟ್ಟೆಗ ಹೋಲಿಕೆ ಮಾಡಿದರೆ ಕಡಿಮೆ ದರಕ್ಕೆ ಇಲ್ಲಿ ಮಾವಿನ ಹಣ್ಣುಗಳನ್ನು ಮಾರಾಟ ಮಾಡಲಾಗುತ್ತದೆ. ರೈತರೇ ಇಲ್ಲಿ ಮಾರಾಟಗಾರರಾಗಿದ್ದು, ಲಾಭ ಕೂಡ ಅವರಿಗೆ ಸೇರಲಿದ್ದು, ಹೆಚ್ಚಿನ ಪ್ರಮಾಣದಲ್ಲಿ ರೈತರಿಂದಲೇ ಹಣ್ಣುಗಳನ್ನು ಖರೀದಿಸಲು ಮನವಿ ಮಾಡಲಾಗಿದೆ.