
ಮಡಿವಾಳದ ಗ್ರ್ಯಾಂಡ್ ಚಾಯ್ಸ್ ಲಾಡ್ಜ್ ನಲ್ಲಿ ಕಳೆದ 8 ದಿನಗಳಿಂದ ಪ್ರೇಯಸಿ ಜೊತೆ ತಂಗಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಮೂಲದ ಯುವಕನೋರ್ವ ನಿಗೂಢ ರೀತಿ ಸಾವನ್ನಪ್ಪಿದ್ದಾನೆ. ಪುತ್ತೂರು ಮೂಲದ 20 ವರ್ಷದ ತಕ್ಷಿತ್ ಮೃತ ಯುವಕ.


ವಿರಾಜಪೇಟೆ ಮೂಲದ ರಕ್ಷಿತಾ ಎನ್ನುವ ಯುವತಿ ಜೊತೆ ಅ.9ರಿಂದ ಇವರು ಲಾಡ್ಜ್‌ನಲ್ಲಿ ರೂಂ ಮಾಡಿಕೊಂಡಿದ್ದರು. ಹೊಟೇಲ್ ರೂಮಿಗೆ ಸ್ವಿಗ್ಗಿ, ಜೊಮೆಟೋದಲ್ಲಿ ಊಟ ತರಿಸಿಕೊಂಡು ಸೇವಿಸುತ್ತಿದ್ದರು. ಅದು ಬಿಟ್ಟರೆ ಹೊರಗೆ ಹೋಗಿರಲಿಲ್ಲ. ಅ.17ರಂದು ಮಧ್ಯಾಹ್ನ ಯುವತಿ ಲಾಡ್ಜ್ ನಿಂದ ಹೊರ ಹೋಗಿದ್ದಳು. ರಾತ್ರಿಯಾದರೂ ಯುವಕ ಹೊರಗೆ ಬಾರದೇ ಇದ್ದುದರಿಂದ ಹೊಟೇಲ್ ಸಿಬಂದಿ ಬಾಗಿಲು ಬಡಿದಿದ್ದು ಓಪನ್ ಆಗದೇ ಇದ್ದಾಗ ಮಾಸ್ಟರ್ ಕೀ ಮೂಲಕ ಓಪನ್ ಮಾಡಿದ್ದಾರೆ.
ಆಗ ಯುವಕ ತಕ್ಷಿತ್ ಮಲಗಿದಲ್ಲೇ ಮೃತಪಟ್ಟಿರುವುದು ಕಂಡುಬಂದಿದ್ದು ಮಡಿವಾಳ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಯುಡಿಆರ್ ದಾಖಲಿಸಿದ್ದು ತನಿಖೆ ನಡೆಸುತ್ತಿದ್ದಾರೆ. ಎಂಟು ದಿನಗಳಿಂದ ಜೋಡಿ ಸ್ವಿಗ್ಗಿಯಲ್ಲಿ ಫುಡ್ ಆರ್ಡರ್ ಮಾಡಿ ಊಟ ತರಿಸಿ ತಿಂದಿದ್ದಾರೆ. ಆದರೆ ನಿನ್ನೆ ಊಟದ ನಂತರ ಇಬ್ಬರಿಗೂ ಫುಡ್ ಪಾಯ್ಸನ್ ಆಗಿ ಮೆಡಿಕಲ್ ನಿಂದ ಮಾತ್ರೆಗಳನ್ನು ತರಿಸಿ ತಿಂದಿದ್ದಾರಂತೆ.


ತಕ್ಷಿತ್ ಹಾಗೂ ಯುವತಿ ಮಂಗಳೂರಿನ ಕಾಲೇಜು ಒಂದರಲ್ಲಿ ವ್ಯಾಸಂಗ ಮಾಡಿದ್ದರು ಎನ್ನಲಾಗ್ತಿದೆ. ಮೈಸೂರಿನಲ್ಲಿ ಓದೋಕೆ ಹೋಗ್ತೀನಿ ಅಂತ ಹೇಳಿ ಯುವಕ, ಲವರ್ ಜೊತೆಗೆ ಬೆಂಗಳೂರಿಗೆ ಬಂದಿದ್ದಾನೆ ಎನ್ನಲಾಗುತ್ತಿದೆ. ಯುವಕ ದಿಢೀರ್ ಸಾವಿಗೀಡಾಗಿದ್ದು ಅನುಮಾನ ಮೂಡಿಸಿದೆ. ಹೊಟೇಲ್ ಸಿಸಿಟಿವಿ ಪಡೆದಿರುವ ಪೊಲೀಸರು ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ. ಮಲಗಿದಲ್ಲೇ ಸಾವನ್ನಪ್ಪಿದ್ದರಿಂದ ಹೃದಯಾಘಾತದಿಂದ ಸಾವು ಸಂಭವಿಸಿರುವ ಸಾಧ್ಯತೆಯೂ ಇದೆ. ಯುವಕ ಸಾವನ್ನಪ್ಪಿದ ಬಗ್ಗೆ ತಿಳಿದೇ ಯುವತಿ ರೂಮ್ ಬಿಟ್ಟು ಹೋಗಿದ್ದಾಳೆಯೇ ಎನ್ನುವ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
