
ಉಡುಪಿ: ಕರಾವಳಿ ಮಲೆನಾಡಿನ ರೈಲ್ವೆ ಇಲಾಖೆಯ ಸುಧಾರಣೆ ನಿಟ್ಟಿನಲ್ಲಿ ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದ ಕೋಟ ಶ್ರೀನಿವಾಸ ಪೂಜಾರಿಯವರು ಕೇಂದ್ರ ರೈಲ್ವೆ ಇಲಾಖೆಯ ಸಚಿವ ಅಶ್ವಿನಿ ವೈಷ್ಣವ್‌ರವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಈಗಿನ ಪಂಚಗಂಗಾ ರೈಲಿನ ಬಳಕೆದಾರರನ್ನು ಹೊರತುಪಡಿಸಿ ತಡರಾತ್ರಿ ಉಡುಪಿ ಕುಂದಾಪುರ ಕಾರವಾರ ಕಡೆ ಪ್ರಯಾಣ ಬೆಳೆಸುವ ಅಸಂಖ್ಯಾತ ರೈಲು ಬಳಕೆದಾರರಿಗಾಗಿ ಪಡೀಲ್ ಬೈಪಾಸ್ ಮೂಲಕ ಹೊಸ ಬೆಂಗಳೂರು ಕಾರವಾರ ನಡುವೆ ರೈಲಿಗೆ ಮನವಿ ಮಾಡಿದರು.ಈಗಾಗಲೇ ಬರುತ್ತಿರುವ ಎರ್ನಾಕುಲಂ ನಿಜಾಮುದ್ದೀನ್ ರೈಲನ್ನು ಕುಂದಾಪುರದಲ್ಲಿ ನಿಲ್ಲಿಸುವಂತೆ ಕೊಟ್ಟ ಮನವಿಗೆ ಸಚಿವರು ಒಪ್ಪಿಕೊಂಡರು. ಮತ್ಸ್ಯಗಂದಾ ರೈಲಿನ ಬೋಗಿಗಳು ಅತ್ಯಂತ ಹಳೆಯದಾದ ಐಸಿಎಪ್ ಮಾದರಿಯದಾಗಿದ್ದು ತಕ್ಷಣವೇ ಅದನ್ನು ಆಧುನಿಕ LHB ಕೋಚಿಗೆ ಮೇಲ್ದರ್ಜೆಗೆ ಏರಿಸಲು ಕೋರಲಾಯಿತು. ಬಹುದಿನದ ಬೇಡಿಕೆಯಾದ ಕೊಂಕಣ್ ರೈಲ್ವೆ ಯನ್ನು ಭಾರತದ ರೈಲ್ವೆಯಲ್ಲಿ ವಿಲೀನ ಮಾಡಬೇಕೆಂಬ ಮನವಿ ಮಾಡಿದ್ದು ಈ ಬಗ್ಗೆ ತಾನು ಹಾಗೂ ಮಂಗಳೂರಿನ ಲೋಕಸಭಾ ಸದಸ್ಯರಾದ ಬ್ರಿಜೇಶ್ ಚೌಟ ಮತ್ತು ಉತ್ತರ ಕನ್ನಡ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಇವರಿಬ್ಬರು ಹಿಂದೆ ರೈಲ್ವೆ ಸಚಿವರಿಗೆ ಕೊಟ್ಟ ಮನವಿಯನ್ನು ನೆನಪಿಸಿದರು. ಕೊಂಕಣ್ ರೈಲ್ವೆ ಭಾರತೀಯ ರೈಲ್ವೆಯಲ್ಲಿ ವಿಲೀನವಾದರೆ ಮಾತ್ರ ಈಗಿರುವ ರೈಲ್ವೇ ಹಳಿಗಳ ಮೇಲ್ದರ್ಜೆ ಮತ್ತು ಹೆಚ್ಚುವರಿ ಭೋಗಿಗಳ ಜೋಡಣೆ ಹಾಗೂ ಈಗ ಇರುವ ರೈಲ್ವೆ ನಿಲ್ದಾಣವನ್ನು ಮೇಲ್ದರ್ಜೆಗೆ ಸೇರಿಸಲಾವಕಾಶ ಮತ್ತು ಹೊಸ ರೈಲು ಬೇಡಿಕೆಗಳ ಬಗ್ಗೆ ವಿವರಿಸಿದರು.ಸಚಿವ ಅಶ್ವಿನಿ ವೈಷ್ಣವ್ ಅವರು ಈ ಎಲ್ಲಾ ವಿಚಾರಗಳಿಗೆ ಸಹಮತ ವ್ಯಕ್ತಪಡಿಸಿದ್ದಾಗಿ ಕೋಟ ತಿಳಿಸಿದ್ದಾರೆ.

