
ನವದೆಹಲಿ : ಭಾರತದ ಇತಿಹಾಸದಲ್ಲಿಯೇ ಪ್ರಪ್ರಥಮ ಬಾರಿಗೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿರುವ ರಾಷ್ಟ್ರಪತಿ ಭವನವು ವಿವಾಹ ಸಮಾರಂಭವೊಂದಕ್ಕೆ ಸಾಕ್ಷಿಯಾಗಲಿದೆ. ಮದುವೆ ಸಿದ್ಧತೆಗಳನ್ನು ಮಾಡಿಕೊಳ್ಳಲು ರಾಷ್ಟ್ರಪತಿ ದ್ರೌಪದಿ ಮುರ್ಮು ಒಪ್ಪಿಗೆ ನೀಡಿದ್ದಾರೆ. ಇದು ಯಾವುದೇ ರಾಜಕಾರಣಿಗಳ ಮಕ್ಕಳದ್ದು, ಸೆಲೆಬ್ರಿಟಿಗಳದ್ದು ಅಲ್ಲ. ಹಾಗಾದರೆ ಆ ಮದುವೆ ಯಾರದ್ದು ಗೊತ್ತಾ ? ಇಲ್ಲಿದೆ ಪೂರ್ತಿ ಮಾಹಿತಿ.


ದೇಶದ ರಾಷ್ಟ್ರಪತಿಗಳ ಅಧಿಕೃತ ನಿವಾಸವಾಗಿ ರಾಷ್ಟ್ರಪತಿ ಭವನವು ಕಾರ್ಯನಿರ್ವಹಿಸುತ್ತದೆ. ಹೆಚ್ಚಾಗಿ ವಿದೇಶಿ ಗಣ್ಯರು ದೇಶಕ್ಕೆ ಅಧಿಕೃತ ಭೇಟಿಗಾಗಿ ಬಂದಾಗ ರಾಷ್ಟ್ರಪತಿ ಭವನದಲ್ಲಿ ಉಳಿಯುತ್ತಾರೆ. ಆದರೆ ಇದೀಗ ಅಚ್ಚರಿ ಎಂಬಂತೆ ಇದೇ ಮೊದಲ ಬಾರಿ ಕೇಂದ್ರೀಯ ಮೀಸಲು ಪೊಲೀಸ್ ಪಡೆಯ (ಸಿಆರ್‌ಪಿಎಫ್) ಅಧಿಕಾರಿ ಪೂನಂ ಗುಪ್ತಾ ಅವರ ಮದುವೆ ರಾಷ್ಟ್ರಪತಿ ಭವನದಲ್ಲಿ ನಡೆಯಲಿದೆ.
ಇದನ್ನೂ ಓದಿ : 5 ಕೋಟಿ ಜನ ಭಾಗಿಯಾಗುವ ನಿರೀಕ್ಷೆಯಲ್ಲಿ ಮಹಾಕುಂಭ ಮೇಳದ ಕೊನೆಯ ಶಾಹಿ ಸ್ನಾನ ಪೂನಂ ಗುಪ್ತಾ ಯಾರು ?


ಸಿಆರ್‌ಪಿಎಫ್‌ನಲ್ಲಿ ಸಹಾಯಕ ಕಮಾಂಡೆಂಟ್ ಆಗಿರುವ ಪೂನಂ ಗುಪ್ತಾ, ಪ್ರಸ್ತುತ ರಾಷ್ಟ್ರಪತಿ ಮುರ್ಮು ಅವರ ವೈಯಕ್ತಿಕ ಭದ್ರತಾ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಪೂನಂ ಗಣಿತಶಾಸ್ತ್ರ ಮತ್ತು ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ, ಗ್ವಾಲಿಯರ್‌ನ ಜಿವಾಜಿ ವಿಶ್ವವಿದ್ಯಾಲಯದಿಂದ BEd ಪದವಿ ಪಡೆದುಕೊಂಡಿದ್ದಾರೆ. 2018ರ ಯುಪಿಎಸ್‌ಸಿ ಸಿಆರ್‌ಪಿಎಫ್ ಪರೀಕ್ಷೆಯಲ್ಲಿ 81ನೇ Rank ಪಡೆದಿದ್ದಾರೆ. ಬಿಹಾರದ ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಸೇವೆ ಸಲ್ಲಿಸಿದ್ದ ಪೂನಂ ಆ ಬಳಿಕ ಕಠಿಣ ಪ್ರದೇಶಗಳಲ್ಲೂ ತಮ್ಮ ಕರ್ತವ್ಯ ನಿಷ್ಠೆ ಮೆರೆದು ಸೈ ಎನಿಸಿಕೊಂಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲೂ ತಮ್ಮದೇ ಅಭಿಮಾನಿ ಬಳಗ ಹೊಂದಿರುವ ಪೂನಂ, ಆಗಾಗ ಮಹಿಳಾ ಸಬಲೀಕರಣ ಹಾಗೂ ಸ್ಫೂರ್ತಿದಾಯಕ ಸಂದೇಶಗಳನ್ನು ಪೋಸ್ಟ್ ಮಾಡುತ್ತಿರುತ್ತಾರೆ. ಇದೇ 12ರಂದು ಪೂನಂ ಗುಪ್ತಾ ಪ್ರಸ್ತುತ ಜಮ್ಮು ಮತ್ತು ಕಾಶ್ಮೀರದಲ್ಲಿ ನೇಮಕಗೊಂಡಿರುವ ಸಹಾಯಕ ಕಮಾಂಡೆಂಟ್ ಅವನೀಶ್ ಕುಮಾರ್ ಅವರನ್ನು ಮದುವೆಯಾಗಲಿದ್ದಾರೆ.
