
ಕಾಸರಗೋಡು: ಜಿಲ್ಲೆಯ ಮಂಜೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯ ಕಡಂಬಾರಿನಲ್ಲಿ ಶಿಕ್ಷಕಿ ಮತ್ತು ಆಕೆಯ ಪತಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ತೀವ್ರ ಆರ್ಥಿಕ ಸಂಕಷ್ಟದಿಂದ ದಂಪತಿ ಈ ನಿರ್ಧಾರಕ್ಕೆ ಬಂದಿದ್ದಾರೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.


ಮೃತಪಟ್ಟವರನ್ನು ಪೇಂಟಿಂಗ್ ಮತ್ತು ಪಾಲಿಶಿಂಗ್ ಕೆಲಸ ಮಾಡುವ ಅಜಿತ್ ಮತ್ತು ವರ್ಕಾಡಿ ಬೇಕರಿ ಜಂಕ್ಷನ್ ಬಳಿಯ ಖಾಸಗಿ ಶಾಲೆಯ ಶಿಕ್ಷಕಿ ಶ್ವೇತಾ (27) ಎಂದು ಗುರುತಿಸಲಾಗಿದೆ.
ಅಜಿತ್, ಅವರ ಪತ್ನಿ ಶ್ವೇತಾ ಮತ್ತು ತಾಯಿ ಪ್ರಮೀಳಾ ಅವರು ಮನೆಯಲ್ಲಿ ವಾಸವಾಗಿದ್ದರು. ಪ್ರಮೀಳಾ ಅವರು ಕೆಲಸಕ್ಕೆ ತೆರಳಿದ್ದರು. ಸೋಮವಾರ ಬೇಗ ಮನೆಗೆ ಬಂದ ಶ್ವೇತಾ ಮತ್ತು ಪತಿ ಅಜಿತ್, ತಮ್ಮ ಮೂರು ವರ್ಷದ ಮಗುವನ್ನು ಕರೆದುಕೊಂಡು ಬಂದಿಯೋಡ್‌ನಲ್ಲಿರುವ ಶ್ವೇತಾ ಅವರ ಸಹೋದರಿಯ ಮನೆಗೆ ಹೋಗಿದ್ದರು. “ಒಂದು ಕಡೆ ಹೋಗಿ ಬರಬೇಕು, ಅಲ್ಲಿಯವರೆಗೆ ಮಗುವನ್ನು ನೋಡಿಕೊಳ್ಳಿ” ಎಂದು ಹೇಳಿ ಮಗುವನ್ನು ಬಿಟ್ಟು ದಂಪತಿ ಹಿಂತಿರುಗಿದ್ದರು.


ನಂತರ ಮನೆಗೆ ಮರಳಿದ ಇಬ್ಬರೂ ವಿಷ ಸೇವಿಸಿದ್ದಾರೆ. ಸಂಜೆ ವೇಳೆಗೆ ದಂಪತಿ ಮನೆಯಂಗಳದಲ್ಲಿ ಅಸ್ವಸ್ಥರಾಗಿ ಬಿದ್ದಿರುವುದನ್ನು ಸುತ್ತಮುತ್ತಲಿನ ನಿವಾಸಿಗಳು ಗಮನಿಸಿದ್ದಾರೆ. ತಕ್ಷಣವೇ ಅವರನ್ನು ಹೊಸಂಗಡಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಇಬ್ಬರೂ ಮೃತಪಟ್ಟಿದ್ದಾರೆ.

ಈ ಕುರಿತು ಮಂಜೇಶ್ವರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ನಡೆಸುತ್ತಿದ್ದಾರೆ. ಆರ್ಥಿಕ ಸಮಸ್ಯೆಗಳೇ ಆತ್ಮಹತ್ಯೆಗೆ ಕಾರಣವಾಯಿತೇ ಎಂಬ ಬಗ್ಗೆ ಪೊಲೀಸರು ಪರಿಶೀಲಿಸುತ್ತಿದ್ದಾರೆ.