
ಮಂಗಳೂರು: ಹೂಡಿಕೆ ಕುರಿತಂತೆ ಅಪರಿಚಿತ ಸಂಖ್ಯೆಯಿಂದ ವಾಟ್ಸ್ಆ್ಯಪ್‌ಗೆ ಬಂದ ಲಿಂಕ್ ಕ್ಲಿಕ್ ಮಾಡಿ 42.50 ಲಕ್ಷ ರೂ. ಕಳೆದುಕೊಂಡ ಬಗ್ಗೆ ಸೆನ್ ಪೊಲೀಸ್ ಠಾಣೆಗೆ ವ್ಯಕ್ತಿಯೊಬ್ಬರು ದೂರು ನೀಡಿದ್ದಾರೆ.


ದೂರುದಾರರ ಜು.13ರಂದು ಪ್ರಿಯಾ ಅಗರ್ವಾಲ್ ಎಂಬ ಹೆಸರಿನ ಅಪರಿಚಿತ ವ್ಯಕ್ತಿಯು ಹೂಡಿಕೆ ಬಗ್ಗೆ ಮಾಹಿತಿ ಇರುವ ಲಿಂಕ್ ತನಗೆ ಕಳುಹಿಸಿದ್ದರು. ಅದನ್ನು ಕ್ಲಿಕ್ ಮಾಡಿ ನೋಡಿದ ಬಳಿಕ ಇನ್ನೊಂದು ಲಿಂಕ್ ಕಳುಹಿಸಿ ಆ್ಯಪ್ ನಲ್ಲಿ ನೋಂದಾಯಿಸಿಕೊಳ್ಳುವಂತೆ ಸೂಚಿಸಿದ್ದರು. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಲು ನಂಬರ್ ಕೂಡಾ ಕಳುಹಿಸಿಕೊಟ್ಟಿದ್ದರು. ಅವರು ತಿಳಿಸಿದಂತೆ ತಾನು ಆ ಲಿಂಕ್‌ಗೆ ವೈಯಕ್ತಿಕ ಮಾಹಿತಿ ಅಪ್ಲೋಡ್ ಮಾಡಿ ಹೆಸರು ನೋಂದಾಯಿಸಿಕೊಂಡಿದ್ದೆ.
ಹೆಚ್ಚು ಲಾಭಗಳಿಸುವ ಆಮಿಷ ಒಡ್ಡಿದಂತೆ ತಾನು ಜು.24ರಿಂದ ಸೆ.19ರವರೆಗೆ ವಿವಿಧ ಬ್ಯಾಂಕ್ ಖಾತೆಗಳಿಂದ ಹಂತ ಹಂತವಾಗಿ 42.50 ಲಕ್ಷ ರೂ.ವನ್ನು ವರ್ಗಾವಣೆ ಮಾಡಿದ್ದೆ. ಇನ್ನೊಂದು ಲಿಂಕ್ ಕಳುಹಿಸಿ ಸೆ.20ರಂದು 12 ಲಕ್ಷ ರೂ. ಟ್ಯಾಕ್ಸ್ ಪಾವತಿಸುವಂತೆ ಒತ್ತಾಯಿಸಿದಾಗ ಅನುಮಾನ ಬಂತು. ವಿಚಾರಿಸಿದಾಗ ತಾನು ಮೋಸ ಹೋಗಿರುವುದು ತಿಳಿದು ಬಂದಿದೆ. ಹಣ ಹೂಡಿಕೆ ನೆಪದಲ್ಲಿ ಅಪರಿಚಿತ ವ್ಯಕ್ತಿಗಳು ತನಗೆ ವಂಚನೆ ಮಾಡಿದ್ದು, ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಹಣ ಕಳಕೊಂಡ ವ್ಯಕ್ತಿ ದೂರಿನಲ್ಲಿ ಆಗ್ರಹಿಸಿದ್ದಾರೆ.

