
ಮಂಗಳೂರು: ಯಕ್ಷಗಾನ ಕ್ಷೇತ್ರದ ಪ್ರಪ್ರಥಮ ಮಹಿಳಾ ವೃತ್ತಿಪರ ಭಾಗವತರೆಂದೇ ಖ್ಯಾತಿವೆತ್ತ ಕರ್ನಾಟಕ ರಾಜ್ಯೋತ್ಸವ ಪುರಸ್ಕೃತೆ ಲೀಲಾವತಿ ಬೈಪಾಡಿತ್ತಾಯ (77) ಅಲ್ಪಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ಶನಿವಾರ ಕೊನೆಯುಸಿರೆಳೆದಿದ್ದಾರೆ.


ಮೃತರು ಪತಿ, ಹಿರಿಯ ಹಿಮ್ಮೇಳವಾದಕ ಹರಿನಾರಾಯಣ ಬೈಪಾಡಿತ್ತಾಯ, ಪುತ್ರರಾದ ಪತ್ರಕರ್ತ ಅವಿನಾಶ್ ಮತ್ತು ಗುರುಪ್ರಸಾದ್ ಅವರನ್ನು ಅಗಲಿದ್ದಾರೆ. ಮೃತ ಲೀಲಾವತಿ ಅವರ ಅಂತಿಮ ಸಂಸ್ಕಾರವು ಡಿ.15ರಂದು ಬೆಳಗ್ಗೆ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.
ಕಾಸರಗೋಡಿನ ಮಧೂರಿನಲ್ಲಿ 1947ರ ಮೇ 23ರಂದು ಜನಿಸಿದ್ದ ಲೀಲಾವತಿ ಸಣ್ಣ ಪ್ರಾಯದಲ್ಲೇ ತಂದೆಯನ್ನು ಕಳೆದು ಕೊಂಡ ಕಾರಣಕ್ಕಾಗಿ ತಾಯಿ ತವರೂರು ಮಧೂರಿನ ಪಡುಕಕ್ಕೆಪ್ಪಾಡಿ ಎಂಬಲ್ಲಿ ಸೋದರಮಾವನ ಮನೆಯಲ್ಲಿ ಬೆಳೆಯುತ್ತಾರೆ. ಸೋದರಮಾವ ರಾಮಕೃಷ್ಣ ಭಟ್, ಮಧೂರು ದೇವಾಲಯದಲ್ಲಿ ದೇವ ನೃತ್ಯ ಕಲಾವಿದರಾಗಿದ್ದರು.ಬಡತನದಿಂದಾಗಿ ಲೀಲಾವತಿಗೆ ವಿದ್ಯೆ ಕಲಿಯಲಾಗಲಿಲ್ಲ. ಸುಮಧುರವಾಗಿ ಹಾಡುತ್ತಿದ್ದ ಅವರು ಪಿಟೀಲು ವಾದಕ ಪದ್ಮನಾಭ ಸರಳಾಯರ ಬಳಿ ಕರ್ನಾಟಕ ಶಾಸ್ತ್ರೀಯ ಸಂಗೀತ ಕಲಿತರು. 23ನೇ ವರ್ಷ ಪ್ರಾಯದಲ್ಲಿ ತೆಂಕುತಿಟ್ಟಿನ ಚೆಂಡೆ-ಮದ್ದಳೆಯ ಕಲಾವಿದ ಹರಿನಾರಾಯಣ ಬೈಪಾಡಿತ್ತಾಯ ಅವರನ್ನು ಮದುವೆಯಾಗಿ ಕಡಬಕ್ಕೆ ಆಗಮಿಸುತ್ತಾರೆ.


ಲೀಲಾವತಿ ಅವರ ಶಾಸ್ತ್ರೀಯ ಸಂಗೀತ ಗಾಯನ ಪ್ರತಿಭೆಯನ್ನು ಅರಿತ ಪತಿ ಹರಿನಾರಾಯಣರು ಯಕ್ಷಗಾನ ಹಾಡುಗಾರಿಕೆಗೆ ಪ್ರೋತ್ಸಾಹ ನೀಡಿದರು. ಆರಂಭದಲ್ಲಿ ಕಡಬದ ಸುತ್ತಲಿನ ಶಾಲಾ ವಾರ್ಷಿಕೋತ್ಸವ, ಮದುವೆ, ಉಪನಯನ ಮತ್ತಿತರ ಕಾರ್ಯಕ್ರಮಗಳಲ್ಲಿ ಆಯೋಜಿಸುವ ತಾಳಮದ್ದಲೆಯ ಪ್ರಸಂಗಗಳಲ್ಲಿ ಹಾಡುಗಾರಿಕೆ ನಡೆಸಿಕೊಟ್ಟರು. ಬಳಿಕ ‘ಸೆಟ್ ಮೇಳ’ಗಳ ಪ್ರಸಂಗದಲ್ಲಿಯೂ ಹಾಡುಗಾರಿಕೆ ನಡೆಸಿದರು.

ಬೆಳ್ತಂಗಡಿಯಲ್ಲಿ ಅರುವ ನಾರಾಯಣ ಶೆಟ್ಟಿ ‘ಆಳದಂಗಡಿ ಮೇಳ’ ಕಟ್ಟಿದ್ದರು. ಆ ಮೇಳದಲ್ಲಿ ಪತಿ ಹರಿನಾರಾಯಣ ಬೈಪಾಡಿತ್ತಾಯ ಚೆಂಡೆ- ತಾಳಮದ್ದಲೆ ನಿರ್ವಹಿಸುತ್ತಿದ್ದರು. ಲೀಲಾವತಿ ಭಾಗವತಿಕೆ ಮಾಡುತ್ತಿದ್ದರು. ಹಲವು ಯಕ್ಷಗಾನ ಕಲಾವಿದರ ಒಡನಾಟವು ಲೀಲಾವತಿಗೆ ಲಭಿಸಿತು.
ಕಾಳಿಂಗ ನಾವಡ, ಎಂ.ಎಲ್. ಸಾಮಗ, ಪಾತಾಳ ವೆಂಕಟರಮಣ ಭಟ್, ಈಶ್ವರ ಭಟ್, ಶೇಣಿ ಗೋಪಾಲಕೃಷ್ಣ ಭಟ್, ರಾಮದಾಸ ಸಾಮಗ, ಬಣ್ಣದ ಮಾಲಿಂಗ, ಪ್ರಭಾಕರ ಜೋಷಿ, ಬಲಿಪ ನಾರಾಯಣ ಭಾಗವತರು, ಕಡತೋಕ ಭಾಗವತರು, ನೆಡ್ಲೆ ನರಸಿಂಹ ಭಟ್, ಇತರ ಮುಮ್ಮೇಳ ಮತ್ತು ಹಿಮ್ಮೇಳ ಕಲಾವಿದರ ಒಡನಾಟವೂ ಲೀಲಾವತಿಯ ಕಲಾಸೇವೆಗೆ ಸಹಕಾರವಾಯಿತು.