
Read Time:1 Minute, 20 Second
ಬೆಂಗಳೂರು: ಕನ್ನಡತಿ ಸೀರಿಯಲ್ ಮೂಲಕ ಫೇಮಸ್ ಆದ ನಟ ಕಿರಣ್ ರಾಜ್ ಅವರ ಕಾರು ಅಪಘಾತಕ್ಕೀಡಾಗಿದ್ದು, ಅವರಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.ಕಿರಣ್ ರಾಜ್ ಅವರು ವೃದ್ಧಾಶ್ರಮಕ್ಕೆ ಹೋಗಿ ಬರುತ್ತಿದ್ದರು. ಈ ವೇಳೆ ಎಕ್ಸಿಕ್ಯೂಟಿವ್ ಪ್ರೊಡ್ಯೂಸರ್ ಗಿರೀಶ್ ಕಾರು ಚಾಲನೆ ಮಾಡುತ್ತಿದ್ದು, ಕಾರು ನಿಯಂತ್ರಣ ತಪ್ಪಿ ಕಂಬಕ್ಕೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಅಪಘಾತದಲ್ಲಿ ಕಿರಣ್ ರಾಜ್ ಅವರ ಎದೆಯ ಭಾಗಕ್ಕೆ ಪೆಟ್ಟಾಗಿದ್ದು, ಎಕ್ಸಿಕ್ಯೂಟಿವ್ ಪ್ರೊಡ್ಯೂಸರ್ ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.ಸದ್ಯ ಕಿರಣ್ ರಾಜ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಹೇಳಲಾಗಿದೆ. ಘಟನೆಯಲ್ಲಿ ಕಾರಿನ ಬಲಭಾಗಕ್ಕೆ ಹಾನಿಯಾಗಿದೆ. ಘಟನಾ ಸ್ಥಳಕ್ಕೆ ಕೆಂಗೇರಿ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಇನ್ನು ಸೆಪ್ಟೆಂಬರ್ 12ರಂದು ಕಿರಣ್ ರಾಜ್ ನಟನೆಯ ‘ರಾನಿ’ ಸಿನಿಮಾ ಬಿಡುಗಡೆ ಆಗುತ್ತಿದೆ. ಅದಕ್ಕೂ ಮುನ್ನವೇ ಈ ರೀತಿಯ ದುರ್ಘಟನೆ ಸಂಭವಿಸಿದೆ.

