
ಕೇರಳ : ರೈಲು ಅಪಘಾತಗಳು ನಡೆಸಲು ಹಲವು ವಿಧ್ವಂಸಕ ಕೃತ್ಯಗಳು ನಡೆದಿರುವ ಘಟನೆ ದೇಶದಲ್ಲಿ ಸಾಕಷ್ಟು ಕಡೆಯಲ್ಲಿ ಬೆಳಕಿಗೆ ಬಂದಿದೆ.


ಇಂತಹುದೇ ಒಂದು ಘಟನೆ ಫೆ.22ರ ಶನಿವಾರ ನಸುಕಿನ ಜಾವ 3.30 ರ ಸುಮಾರಿಗೆ ಕೇರಳದಲ್ಲಿ ನಡೆದಿರುವುದು ಬೆಳಕಿಗೆ ಬಂದಿದೆ. ಕೇರಳದ ಕೊಲ್ಲಂನ ಕುಂದರಾದಲ್ಲಿ ದುಷ್ಕರ್ಮಿಗಳು ರೈಲ್ವೇ ಹಳಿಗೆ ಅಡ್ಡಲಾಗಿ ಟೆಲಿಫೋನ್ ಕಂಬ ಹಾಕಿ ರೈಲು ಹಳಿ ತಪ್ಪಿಸುವ ಯತ್ನ ಮಾಡಿದ್ದಾರೆ.
ಕೊಲ್ಲಂನ ಕುಂದರಾದ ಆರುಮುರಿಕಡ(arumurikkada) ಎಂಬಲ್ಲಿ ಹಳೆಯ ಅಗ್ನಿಶಾಮಕ ದಳದ ಸ್ಟೇಷನ್ ಸಮೀಪ ಈ ಘಟನೆ ನಡೆದಿದೆ. ಕೆಲಸ ಮುಗಿಸಿ ವಾಪಾಸಾಗುತ್ತಿದ್ದ ವ್ಯಕ್ತಿಯೊಬ್ಬರು ಹಳಿಯ ಮೇಲೆ ಇರಿಸಲಾಗಿದ್ದ ಟೆಲಿಫೋನ್ ಕಂಬವನ್ನು ಗಮನಿಸಿದ್ದಾರೆ. ಬಳಿಕ ಪರಿಚಿತ ರೈಲ್ವೇ ಸಿಬ್ಬಂದಿಯೊಬ್ಬರಿಗೆ ಈ ಬಗ್ಗೆ ಮಾಹಿತಿ ನೀಡಿದ್ದು ಜೊತೆಗೆ ಎಜುಕೋನ್(Ezukone) ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳಕ್ಕೆ ಆಗಮಿಸಿದ ಪೊಲೀಸರು ಈ ಟೆಲಿಫೋನ್ ಕಂಬವನ್ನು ರೈಲ್ವೇ ಹಳಿಯ ಮೇಲಿನಿಂದ ತೆರವು ಮಾಡಿದ್ದಾರೆ.


ಆದ್ರೆ, ಟೆಲಿಫೋನ್ ಕಂಬ ತೆರವು ಮಾಡಿ ಪೊಲೀಸರು ತೆರಳಿದ ಕೆಲ ಸಮಯದ ಬಳಿಕ ಈ ಕಂಬವನ್ನು ದುಷ್ಕರ್ಮಿಗಳು ಮತ್ತೆ ರೈಲ್ವೇ ಹಳಿಯ ಮೇಲೆ ಇರಿಸಿದ್ದಾರೆ. ನಸುಕಿನ ಜಾವ 3.22 ರ ಸುಮಾರಿಗೆ ಪಾಲರುವಿ ಎಕ್ಸ್‌ಪ್ರೆಸ್ ರೈಲು ಇದೇ ದಾರಿಯಾಗಿ ಬಂದಿದ್ದು, ಹಳಿಗೆ ಅಡ್ಡಲಾಗಿ ಹಾಕಿದ್ದ ಟೆಲಿಫೋನ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಆದರೆ, ಅದೃಷ್ಟವಶಾತ್ ಯಾವುದೇ ದುರ್ಘ*ಟನೆ ನಡೆಯದೆ ರೈಲು ಮುಂದೆ ಸಾಗಿದೆ. ಘಟನೆಯ ಬಗ್ಗೆ ಎಜುಕೋನ್ ಪೊಲೀಸರು ಮಾಹಿತಿ ನೀಡಿದ್ದಾರೆಯಾದ್ರೂ ರೈಲ್ವೇ ಇಲಾಖೆಯಿಂದ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.
