
Read Time:1 Minute, 19 Second
ಕಾಪು: ವರ್ಷದ ಹಿಂದೆ ಕಾಪು ತಾಲೂಕಿನ ಪಾಂಗಾಳದಲ್ಲಿ ಹತ್ಯೆಗೀಡಾಗಿದ್ದ ಪಾಂಗಾಳ ಶರತ್ ಶೆಟ್ಟಿ ಕೊಲೆ ಪ್ರಕರಣದ ಪ್ರಮುಖ ಆರೋಪಿ ಯೋಗೀಶ್ ನ್ಯಾಯಾಲಯದ ಮುಂದೆ ಶರಣಾಗಿದ್ದಾನೆ. ಇದರೊಂದಿಗೆ ವರ್ಷದ ಹಿಂದೆ ದೈವದ ಕಾರ್ಣಿಕ ನುಡಿ ನಿಜವಾಗಿದೆ ಎಂದು ಜನ ಮಾತಾಡಿಕೊಳ್ಳುತ್ತಿದ್ದಾರೆ.



ಶರತ್ ಶೆಟ್ಟಿ ಕೊಲೆ ಬಳಿಕ ತಲೆ ಮರೆಸಿಕೊಂಡಿದ್ದ ಆರೋಪಿಗಳ ಪತ್ತೆಗಾಗಿ ಪೊಲೀಸರು ತನಿಖೆ ಮುಂದುವರಿಸಿರುವಂತೆಯೇ ಮನೆಯವರು ಕುಟುಂಬದ ದೈವದ ಮೊರೆ ಹೋಗಿದ್ದರು. “ಆರೋಪಿ ಎಲ್ಲೇ ಇದ್ದರೂ ಪೊಲೀಸರ ಮುಂದೆ ತಂದು ನಿಲ್ಲಿಸುತ್ತೇನೆ” ಎಂದು ದೈವ ಮನೆಯವರಿಗೆ ಅಭಯ ನೀಡಿತ್ತು. ಅದರಂತೆ ಆತ ತಾನಾಗಿಯೇ ನ್ಯಾಯಾಲಯದ ಮುಂದೆ ಹಾಜರಾಗಿರುವುದು ವಿಶೇಷ. ಕೊಲೆ ನಡೆದು 15 ತಿಂಗಳು ಕಳೆದಿದ್ದು , ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪತ್ತೆ ಮಾಡಲು ಪೊಲೀಸರಿಗೂ ಸಾಧ್ಯವಾಗಿರಲಿಲ್ಲ. ಈ ಮಧ್ಯೆ ಆರೋಪಿ ದಿಢೀರ್ ಶರಣಾಗಿರುವುದು ದೈವದ ಪವಾಡವೇ ಸರಿ ಎಂದು ಇಲ್ಲಿಯ ಆಸ್ತಿಕರು ಮಾತಾಡಿಕೊಳ್ಳುತ್ತಿದ್ದಾರೆ.