
ಪುತ್ತೂರು: ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ವತಿಯಿಂದ ಎರಡನೇ ವರ್ಷದ ಶ್ರೀನಿವಾಸ ಕಲ್ಯಾಣೋತ್ಸವ ಮತ್ತು ಧರ್ಮಸಂಗಮ ಕಾರ್ಯಕ್ರಮ ಡಿಸೆಂಬರ್ 28 ಮತ್ತು 29 ರಂದು ನಡೆಯಲಿದೆ ಎಂದು ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ನ ಸಂಚಾಲಕ ಅರುಣ್ ಕುಮಾರ್ ಪುತ್ತಿಲ ಹೇಳಿದರು.


ಭಕ್ತರ ಬೇಡಿಕೆಯ ಹಿನ್ನಲೆಯಲ್ಲಿ ಈ ಸಲ ಎರಡನೇ ಬಾರಿಗೆ ಶ್ರೀನಿವಾಸ ಕಲ್ಯಾಣೋತ್ಸವವನ್ನು ಏರ್ಪಡಿಸಲು ಟ್ರಸ್ಟ್ ತೀರ್ಮಾನಿಸಿದೆ. ಪುತ್ತೂರು ಮಹತೋಭಾರ ಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರು ಗದ್ದೆಯಲ್ಲಿ ಈ ಬಾರಿಯೂ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಕಲ್ಯಾಣೋತ್ಸವದ ಜೊತೆಗೆ ಧರ್ಮಸಂಗಮ ಕಾರ್ಯಕ್ರಮವನ್ನೂ ಏಪರ್ಡಿಸಲಾಗಿದೆ. ಕಲ್ಯಾಣೋತ್ಸವದ ಅಂಗವಾಗಿ ಡಿಸೆಂಬರ್ 27 ರಂದು ದರ್ಬೆ ವೃತ್ತದಿಂದ ಹೊರೆಕಾಣಿಕೆ ಮೆರವಣಿಗೆ ನಡೆಯಲಿದ್ದು, ಡಿಸೆಂಬರ್ 28 ರಂದು ಸಂಜೆ 4,30 ಕ್ಕೆ ಬೊಳುವಾರಿನಲ್ಲಿ ಶ್ರೀನಿವಾಸ ದೇವರನ್ನು ಬರಮಾಡಿಕೊಂಡು ವೈಭವದ ಬೃಹತ್ ಶೋಭಾಯಾತ್ರೆಯ ಮೂಲಕ ಶ್ರೀದೇವಿ, ಭೂದೇವಿ ಸಹಿತ ಶ್ರೀನಿವಾದ ದೇವರನ್ನು ಕಾರ್ಯಕ್ರಮ ನಡೆಯುವ ಈಶ ಮಂಟಪಕ್ಕೆ ಕರೆತರಲಾಗುತ್ತದೆ.
ಅಂದು ಸಂಜೆ 6 ಗಂಟೆಯಿಂದ ಹಿಂದೂ ಸ್ವಾಮೀಜಿಗಳ ದಿವ್ಯ ಉಪಸ್ಥಿತಿಯಲ್ಲಿ ಧರ್ಮಸಂಗಮ ಧಾರ್ಮಿಕ ಸಭೆ ನಡೆಯಲಿದೆ. ಆ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ ಎಂದ ಅವರು ಡಿ. 29 ರಂದು ಶ್ರೀನಿವಾಸ ಕಲ್ಯಾಣೋತ್ಸವದ ಧಾರ್ಮಿಕ ವಿಧಿ-ವಿಧಾನಗಳು ಬೆಳಿಗ್ಗಿನಿಂದಲೇ ಆರಂಭಗೊಳ್ಳಲಿದ್ದು, ಸಂಜೆ 6 ಗಂಟೆಗೆ ಸಮಸ್ತ ಹಿಂದೂ ಬಂಧುಗಳ ಸಮ್ಮುಖದಲ್ಲಿ ಶ್ತೀನಿವಾಸ ಕಲ್ಯಾಣೋತ್ಸವ ನಡೆಯಲಿದೆ. ಬಳಿಕ ಅನ್ನಸಂತರ್ಪಣೆ ನಡೆಯಲಿದ್ದು, ಕಾರ್ಯಕ್ರಮದ ಹಿನ್ನಲೆಯಲ್ಲಿ ಈಗಾಗಲೇ ಎಲ್ಲಾ ವ್ಯವಸ್ಥೆಗಳನ್ನು ಈಗಾಗಲೇ ಆರಂಭಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು

