
ಗರುಡ ಗ್ಯಾಂಗ್‌ನ ಸಕ್ರೀಯ ಸದಸ್ಯ ಹಾಗೂ ಉಡುಪಿ ಜಿಲ್ಲೆಯಲ್ಲದೇ ನೆರೆಯ ಜಿಲ್ಲೆಗಳಾದ ದಕ್ಷಿಣ ಕನ್ನಡ, ಚಿಕ್ಕಮಗಳೂರು ಜಿಲ್ಲೆಗಳಲ್ಲಿಯೂ ಸಹ ತನ್ನ ಅಪರಾಧಿಕ ಚಟುವಟಿಕೆಗಳನ್ನು ನಡೆಸುತ್ತಿದ್ದ ಕುಖ್ಯಾತ ಆರೋಪಿ ಕಬೀರ್ ಅಲಿಯಾಸ್ ಕಬೀರ್ ಹುಸೇನ್ (46) ನನ್ನು ಗೂಂಡಾ ಕಾಯ್ದೆ ಅಡಿ ಬಂಧಿಸಿರುವ ನಡೆಯನ್ನು ರಾಜ್ಯ ಹೈಕೋರ್ಟ್ ಎತ್ತಿಹಿಡಿದಿದೆ.


ಕಾರ್ಕಳ ನಗರ ಠಾಣಾ ಉಪನಿರೀಕ್ಷಕರು ಜಿಲ್ಲಾ ಎಸ್ಪಿಯವರಿಗೆ ಸಲ್ಲಿಸಿದ ವರದಿಯನ್ನು, ಎಸ್ಪಿ ಅವರು ಜಿಲ್ಲಾಧಿಕಾರಿಯವರಿಗೆ ಸಲ್ಲಿಸಿದ್ದಾರೆ. ಪರಿಶೀಲಿಸಿದ ಅವರು 2025 ರ ಜು.10 ರಂದು ಬಂಧನ ಆದೇಶ ಹೊರಡಿಸಿದ್ದರು. ಕಾರ್ಕಳ ಪೋಲಿಸರು ಅಂದೇ ಆತನನ್ನು ಬಂಧಿಸಿ ಮೈಸೂರಿನ ಕೇಂದ್ರ ಕಾರಗೃಹಕ್ಕೆ ವರ್ಗಾಯಿಸಿದ್ದರು.
ಪೋಲಿಸರ ಈ ನಡೆಯನ್ನು 2025 ಆ.4 ರಂದು ಹೈಕೋರ್ಟ್ನ ಪೀಠದಲ್ಲಿ ಬಂಧನ ಆದೇಶದ ಬಗ್ಗೆ ಆರೋಪಿಯು ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನಡೆದಿದೆ. ನ್ಯಾಯಾಲಯವು ಜಿಲ್ಲಾಧಿಕಾರಿಯವರ ಆದೇಶವನ್ನು ಎತ್ತಿ ಹಿಡಿದು, ಆರೋಪಿಯ ಮೇಲ್ಮನವಿಯನ್ನು ತಿರಸ್ಕರಿಸಿದೆ. ಬಂಧಿತ ಆರೋಪಿಗೆ 2025 ರ ಜು.10ರಿಂದ 1 ವರ್ಷದವರೆಗೆ ಬಂಧನ ಆದೇಶವನ್ನು ಮಾನ್ಯ ಮಾಡಿದೆ. ಬಂಧಿತ ಆರೋಪಿಯ ವಿರುದ್ಧ 2005 ರಿಂದ ಇಲ್ಲಿಯವರೆಗೆ ಒಟ್ಟು 17 ಪ್ರಕರಣಗಳು ದಾಖಲಾಗಿದ್ದು, ಅವುಗಳಲ್ಲಿ 2 ಪ್ರಕರಣಗಳಲ್ಲಿ ಸಜೆಯಾಗಿದೆ.


8 ಪ್ರಕರಣಗಳಲ್ಲಿ ಸಾಕ್ಷಿದಾರರು ಪ್ರತಿಕೂಲ ಸಾಕ್ಷಿ ನುಡಿದದ್ದರಿಂದ ಖುಲಾಸೆಯಾಗಿದ್ದು, 3 ಪ್ರಕರಣಗಳು ರಾಜಿಯಲ್ಲಿ ಮುಕ್ತಾಯವಾಗಿದೆ. 2 ಪ್ರಕರಣಗಳು ನ್ಯಾಯಾಲಯ ವಿಚಾರಣೆಯಲ್ಲಿದ್ದು, ಇನ್ನುಳಿದ 2 ಪ್ರಕರಣಗಳು ತನಿಖೆಯಲ್ಲಿವೆ. ಸಜೆಯಾದ ಪ್ರಕರಣಗಳ ಪೈಕಿ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಠಾಣೆಯಲ್ಲಿ 2012ನೇ ಸಾಲಿನಲ್ಲಿ ವರದಿಯಾದ ಪೊಲೀಸರ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬ0ಧಿಸಿದ0ತೆ, ಆರೋಪಿ 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಯ ಜೊತೆಗೆ 50,000 ದಂಡ ವಿಧಿಸಿತ್ತು.
