
ಮಂಗಳೂರು : ಸಹೋದರಿ ಮತ್ತು ಸ್ನೇಹಿತೆಯ ಎದುರೇ ಬಾಲಕಿ ಟೆರೇಸ್‌ನಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಭಾನುವಾರ ಮಂಗಳೂರಿನ ಬಜಿಲಕೇರಿ ಸಮೀಪದ ವಸತಿ ಸಮುಚ್ಚಯದಲ್ಲಿ ಸಂಭವಿಸಿದೆ. ಮೂಲತಃ ಉತ್ತರ ಪ್ರದೇಶ ಬನಾರಸ್‌ನ ಪ್ರಸ್ತುತ ಬಜಿಲಕೇರಿ ನಿವಾಸಿಯಾಗಿರುವ ಖುಷಿ (14) ಆತ್ಮಹತ್ಯೆ ಮಾಡಿಕೊಂಡ ಬಾಲಕಿ. ಈಕೆ ನಗರದ ಖಾಸಗಿ ಇಂಗ್ಲಿಷ್ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಎಂದು ತಿಳಿದು ಬಂದಿದೆ.


ಸೆ.7ರಂದು ಮಧ್ಯಾಹ್ನ ದೇವಸ್ಥಾನಕ್ಕೆ ತೆರಳಿದ್ದ ಖುಷಿ ಬಳಿಕ ತನ್ನ ಸಹೋದರಿ ಮತ್ತು ಸ್ನೇಹಿತೆಯ ಜತೆಗೆ ಅಪಾರ್ಟ್‌ಮೆಂಟ್‌ನ ಟೆರೇಸ್‌ಗೆ ಹೋಗೋಣ ಎಂದು ಅವರನ್ನು ಕರೆದುಕೊಂಡು ಹೋಗಿದ್ದಾಳೆ. ಅಲ್ಲಿ ಅವರ ಜತೆ ಮಾತನಾಡುತ್ತಲೇ ಅವರ ಕಣ್ಮುಂದೆಯೇ ಟೆರೇಸ್‌ನಿಂದ ಜಿಗಿದಿದ್ದಾಳೆ. ಗಂಭೀರ ಗಾಯಗೊಂಡ ಖುಷಿಯನ್ನು ಅಪಾರ್ಟ್‌ಮೆಂಟ್ ನಿವಾಸಿಗಳು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಆಕೆ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾಳೆ ಎಂದು ಬಂದರು ಠಾಣೆಯ ಪೊಲೀಸರು ತಿಳಿಸಿದ್ದಾರೆ.
ಖುಷಿ ಪ್ರತಿಭಾನ್ವಿತೆ ವಿದ್ಯಾರ್ಥಿನಿಯಾಗಿದ್ದು, ಉತ್ತಮ ಅಂಕ ಪಡೆಯುತ್ತಿದ್ದಳು. ರೀಲ್ಸ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಡುವುದು ಈಕೆಯ ಹವ್ಯಾಸವಾಗಿತ್ತು. ಆದರೆ ಇತ್ತೀಚೆಗೆ ಯಾವುದೋ ಕಾರಣದಿಂದ ಮಾನಸಿಕ ಖಿನ್ನತೆಗೊಳಗಾಗಿದ್ದಳು ಎನ್ನಲಾಗಿದೆ.

