
ಮಲ್ಪೆ: ಸುಮಾರು 20 ಅಡಿ ಆಳದಲ್ಲಿ ಕೆರೆ ನೀರಿಗೆ ಬಿದ್ದ 50 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಇರುವ ಚೀಲವನ್ನು ಮೇಲಕ್ಕೆತ್ತಿದ ಈಶ್ವರ್ ಮಲ್ಪೆ ಅವರ ತಂಡ ವಾರಸುದಾರರಿಗೆ ನೀಡುವ ಮೂಲಕ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.


ಘಟನೆಯ ಹಿನ್ನೆಲೆ
ಚಿಕ್ಕಮಗಳೂರು ಮಾಗಡಿ ಬಳಿ ಕಾರೊಂದು ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಕೆರೆಗೆ ಬಿದ್ದಿತ್ತು. ಅದರಲ್ಲಿದ್ದ ಜುವೆಲರಿ ಅಂಗಡಿಯ ಮಾಲಕ ಈಜಿ ದಡ ಸೇರಿದ್ದರು. ಕಾರನ್ನು ಕ್ರೇನ್ ತರಿಸಿ ಮೇಲಕ್ಕೆತ್ತಲಾಯಿತು. ಆದರೆ ಕಾರಿನಲ್ಲಿದ್ದ 50 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣವಿದ್ದ ಚೀಲ ನೀರಿಗೆ ಬಿದ್ದಿತ್ತು. ಕೂಡಲೇ ಈಶ್ವರ್ ಮಲ್ಪೆಗೆ ಕರೆ ತಿಳಿಸಲಾಯಿತು. ಕೂಡಲೇ ಅಲ್ಲಿಗೆ ತೆರಳಿದ ಈಶ್ವರ್ ಮಲ್ಪೆ ತಂಡ ಕೇವಲ 15 ನಿಮಿಷದಲ್ಲಿ ಚಿನ್ನದ ಚೀಲವನ್ನು ನೀರಿನಿಂದ ಮೇಲಕ್ಕೆತ್ತಿದರು.


ಚಿನ್ನಾಭರಣವಿದ್ದ ಚೀಲ ಕೆಸರಿನಲ್ಲಿ ಹೂತು ಹೋಗಿತ್ತು. ಎಲ್ಲಡೆ ಕತ್ತಲೆ, ಕಣ್ಣಿಗೆ ಏನೂ ತೋರುತ್ತಿರಲಿಲ್ಲ. ಸುಮಾರು 20 ಅಡಿಗಳಷ್ಟು ಆಳಕ್ಕೆ ಹೋಗಿ ಜಾಲಾಡಿದಾಗ ಕೈಗೆ ಸಿಕ್ಕಿತು. ದೇವರ ಅನುಗ್ರಹ ಹಾಗೂ ಜನರ ಆಶೀರ್ವಾದದಿಂದ ಚಿನ್ನ ಮತ್ತೆ ಸಿಗುವಂತಾಗಿದೆ ಎಂದು ಈಶ್ವರ್ ಮಲ್ಪೆ ತಿಳಿಸಿದ್ದಾರೆ.


