
ಅಹಮದಾಬಾದ್: 17ನೇ ಆವೃತ್ತಿಯ ಐಪಿಎಲ್(IPL 2024) ಪಂದ್ಯಾವಳಿ ತನ್ನ ಲೀಗ್ ವ್ಯವಹಾರವನ್ನು ಮುಗಿಸಿದೆ. ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಪ್ಲೇ ಆಫ್ ರೇಸ್ನಿಂದ ಹೊರಬಿದ್ದದ್ದು, ಪಾತಾಳದಲ್ಲಿದ್ದ ಆರ್ಸಿಬಿ ಸತತವಾಗಿ 6 ಪಂದ್ಯಗಳನ್ನು ಗೆದ್ದು ಫೀನಿಕ್ಸ್ನಂತೆ ಎದ್ದು ನಿಂತು 4ನೇ ಸ್ಥಾನ ಅಲಂಕರಿಸಿದ್ದೆಲ್ಲ ಲೀಗ್ ಹಂತದ ಅಚ್ಚರಿ. ಇನ್ನು ಕ್ವಾಲಿಫೈಯರ್ ಮತ್ತು ಎಲಿಮಿನೇಟರ್ ಪಂದ್ಯದ ಕೌತುಕ.


ನಾಳೆ(ಮಂಗಳವಾರ) ನಡೆಯುವ ಮೊದಲ ಕ್ವಾಲಿಫೈಯರ್(KKR vs SRH Qualifier 1) ಪಂದ್ಯದಲ್ಲಿ ಈ ಬಾರಿಯ ಕೂಟದ ಅತ್ಯಂತ ಬಲಿಷ್ಠ ತಂಡಗಳಾದ ಕೋಲ್ಕತ್ತಾ ನೈಟ್ ರೈಡರ್ಸ್(KKR vs SRH) ಮತ್ತು ಸನ್ರೈಸರ್ಸ್ ಹೈದರಾಬಾದ್ ತಂಡಗಳು ಕಣಕ್ಕಿಳಿಯಲಿದೆ. ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುವ ಇತ್ತಂಡಗಳ ಈ ಪಂದ್ಯ ಜಿದ್ದಾಜಿದ್ದಿ ಹೋರಾಟವೊಂದಕ್ಕೆ ಸಾಕ್ಷಿಯಾಗುವ ಎಲ್ಲ ಸಾಧ್ಯತೆ ಇದೆ. ಇದರ ಮಧ್ಯೆ ಮಳೆಯ ಭೀತಿ ಕೂಡ ಎದುರಾಗಿದೆ.
ಇತ್ತಂಡಗಳಲ್ಲಿ ಕೆಕೆಆರ್ ಲೀಗ್ ಹಂತದ ಅಗ್ರಸ್ಥಾನಿ ಎಂಬ ಹೆಗ್ಗಳಿಕೆ ಇದೆ. ಅಷ್ಟೇ ಅಲ್ಲ, ಲೀಗ್ ಹಂತದಲ್ಲಿ ಎದುರಾದ ಒಂದು ಪಂದ್ಯಗಳಲ್ಲಿ ಹೈದರಾಬಾದ್ಗೆ 4 ರನ್ ಅಂತರದ ಸೋಲುಣಿಸಿದ ಹಿರಿಮೆಯನ್ನೂ ಹೊಂದಿದೆ. ಜತೆಗೆ ಉಭಯ ತಂಡಗಳು 26 ಬಾರಿ ಮುಖಾಮುಖಿಯಾಗಿದ್ದು ಈ ಪೈಕಿ ಕೆಕೆಆರ್ 17 ಪಂದ್ಯ ಗೆದ್ದಿದೆ. ಹೈದರಾಬಾದ್ ಗೆದ್ದಿರುವುದು ಕೇವಲ 9 ಪಂದ್ಯ ಮಾತ್ರ. ಈ ಲೆಕ್ಕಾಚಾರದಲ್ಲಿ ಕೆಕೆಆರ್ ನೆಚ್ಚಿನ ತಂಡ ಎಂಬುದರಲ್ಲಿ ಅನುಮಾನವಿಲ್ಲ.

