
Read Time:1 Minute, 26 Second
ಬಂಟ್ವಾಳ: ರಸ್ತೆ ಬದಿಯಲ್ಲಿ ಖಾಲಿ ಜಾಗದಲ್ಲಿ ನಿಲ್ಲಿಸಿ ಟಯರ್ ಚೆಕ್ ಮಾಡುತ್ತಿದ್ದ ವೇಳೆ 108 ಆಂಬ್ಯುಲೆನ್ಸ್ ವಾಹನಕ್ಕೆ ಇನ್ನೋವಾ ಕಾರೊಂದು ಡಿಕ್ಕಿ ಹೊಡೆದು ಎರಡು ವಾಹನಗಳು ಜಖಂಗೊಂಡಿದ್ದು ಅದೃಷ್ಟವಶಾತ್ ಯಾರಿಗೂ ಗಾಯವಿಲ್ಲದೆ ಪಾರಾಗಿರುವ ಘಟನೆ ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಬಂಟ್ವಾಳದ ತುಂಬೆ ಸಮೀಪದ ಕಡೆಗೋಳಿಯಲ್ಲಿ ನಡೆದಿದೆ.


ವಿಟ್ಲದಿಂದ ಮಂಗಳೂರಿಗೆ ರೋಗಿಯನ್ನು ಕರೆದುಕೊಂಡು ಹೋಗಿ ಆಸ್ಪತ್ರೆಗೆ ದಾಖಲಿಸಿ ವಾಪಸು ವಿಟ್ಲಕ್ಕೆ ಬರುತ್ತಿದ್ದ 108 ಅಂಬ್ಯುಲೆನ್ಸ್ ವಾಹನಕ್ಕೆ ಇನ್ನೋವಾ ಕಾರು ಡಿಕ್ಕಿಯಾಗಿದೆ. ಕಡೆಗೋಳಿ ಎಂಬಲ್ಲಿ ಆಂಬ್ಯುಲೆನ್ಸ್ ವಾಹನದ ಚಕ್ರದಲ್ಲಿ ಶಬ್ದ ಬಂದಿದೆ ಎಂದು ರಸ್ತೆಯ ಬದಿಯಲ್ಲಿ ನಿಲ್ಲಿಸಿ ಚಾಲಕ ಕರುಣಾಕರ ಅವರು ಪರಿಶೀಲನೆ ಮಾಡುತ್ತಿದ್ದ ವೇಳೆ ಇನ್ನೋವ ಕಾರು ಚಾಲಕ ಶ್ರವಣ್ ಅಂಬ್ಯುಲೆನ್ಸ್ ವಾಹನದ ಹಿಂಬದಿಗೆ ಡಿಕ್ಕಿ ಹೊಡೆದಿದ್ದಾನೆ.
ಘಟನೆಯಲ್ಲಿ ಯಾವುದೇ ಗಾಯವಾಗದಿದ್ದರೂ ಎರಡು ವಾಹನಗಳಿಗೆ ಹಾನಿಯಾಗಿದೆ. ಪಾಣೆಮಂಗಳೂರು ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

