ವಿಶ್ವಕಪ್‌ ಪಟ್ಟ ಅಲಂಕರಿಸಿದ ಭಾರತೀಯ ಮಹಿಳಾ ಕ್ರಿಕೆಟ್‌ ತಂಡ

0 0
Read Time:6 Minute, 11 Second

ಮುಂಬೈ : ದಶಕಗಳ ಕಾಯುವಿಕೆಯ ನಂತರ ಭಾರತ ವನಿತಾ ಪಡೆ ಕೊನೆಗೂ ಇತಿಹಾಸ ನಿರ್ಮಿಸಿದೆ. ನವಿ ಮುಂಬೈಯ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆದ ಏಕದಿನ ವಿಶ್ವಕಪ್‌ ಕೂಟದ ಫೈನಲ್‌ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾವನ್ನು ಸೋಲಿಸುವ ಮೂಲಕ ಟೀಂ ಇಂಡಿಯಾ ಐಸಿಸಿ ಏಕದಿನ ವಿಶ್ವಕಪ್ 2025ರ ಟ್ರೋಫಿಯನ್ನು ಎತ್ತಿಹಿಡಿದಿದೆ. ಈ ಮೂಲಕ ಕೋಟ್ಯಂತರ ಕ್ರಿಕೆಟ್‌ ಅಭಿಮಾನಿಗಳ ಕನಸನ್ನು ಭಾರತದ ವನಿತೆಯರ ನನಸು ಮಾಡಿದ್ದಾರೆ.

2025ರ ಮಹಿಳಾ ವಿಶ್ವಕಪ್​ನ ಫೈನಲ್ ಪಂದ್ಯದಲ್ಲಿ ಆತಿಥೇಯ ಭಾರತ ಎದುರಾಳಿ ದಕ್ಷಿಣ ಆಫ್ರಿಕಾ ತಂಡವನ್ನು ಸೋಲಿಸಿ ಚೊಚ್ಚಲ ಬಾರಿಗೆ ಏಕದಿನ ವಿಶ್ವಕಪ್ ಎತ್ತಿಹಿಡಿದಿದೆ. ನವಿ ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ವನಿತಾ ಪಡೆ ನಿಗದಿತ 50 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 288 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ತಂಡ 45.3 ಓವರ್​ಗಳಲ್ಲಿ ತನ್ನೇಲ್ಲ ವಿಕೆಟ್ ಕಳೆದುಕೊಂಡು 246 ರನ್ ಕಲೆಹಾಕಲಷ್ಟೇ ಶಕ್ತವಾಗಿ 52 ರನ್​ಗಳಿಗೆ ಸೋಲೊಪ್ಪಿಕೊಂಡಿತು. ಈ ಮೂಲಕ ಭಾರತ ತಂಡ ಮೂರನೇ ಬಾರಿಗೆ ವಿಶ್ವಕಪ್ ಫೈನಲ್​ಗೇರಿ ಟ್ರೋಫಿಯನ್ನು ಎತ್ತಿಹಿಡಿಯುವಲ್ಲಿ ಯಶಸ್ವಿಯಾಗಿದೆ.

ಮೊದಲು ಬ್ಯಾಟ್ ಮಾಡಿದ ಟೀಂ ಇಂಡಿಯಾ, ದಕ್ಷಿಣ ಆಫ್ರಿಕಾಕ್ಕೆ ಗೆಲ್ಲಲು 299 ರನ್‌ಗಳ ಗುರಿಯನ್ನು ನೀಡಿತ್ತು. ಈ ಗುರಿ ಬೆನ್ನಟ್ಟಿದ ಆಫ್ರಿಕಾ ತಂಡವನ್ನು ಟೀಂ ಇಂಡಿಯಾದ ಬೌಲರ್‌ಗಳು 45.2 ಓವರ್‌ಗಳಲ್ಲಿ 246 ರನ್‌ಗಳಿಗೆ ಆಲೌಟ್ ಮಾಡಿ ತಂಡಕ್ಕೆ 52 ರನ್‌ಗಳ ಗೆಲುವು ತಂದುಕೊಟ್ಟರು. ಭಾರತ ಇದಕ್ಕೂ ಮೊದಲು 2005 ಮತ್ತು 2017ರಲ್ಲಿ ವಿಶ್ವಕಪ್ ಫೈನಲ್ ಆಡಿತ್ತು. ಆದರೆ ಗೆಲುವು ಸಾಧಿಸಲು ಸಾಧ್ಯವಾಗಿರಲಿಲ್ಲ. ಆದರೆ ಈ ಬಾರಿ ತನ್ನ ಕನಸನ್ನು ನನಸು ಮಾಡಿಕೊಂಡಿರುವ ಟೀಂ ಇಂಡಿಯಾ ಪಂದ್ಯವನ್ನು ಗೆಲ್ಲುತ್ತಿದ್ದಂತೆ ಸಂಭ್ರಮದಲ್ಲಿ ಮಿಂದೆತ್ತಿತ್ತು. ತಂಡದ ಎಲ್ಲಾ ಆಟಗಾರ್ತಿಯರು ಮೈದಾನದಲ್ಲಿ ಆನಂದಭಾಷ್ಪ ಹರಿಸಿದರು.

ಭಾರತದ ಗೆಲುವಿನ ರೂವಾರಿ ಶಫಾಲಿ ವರ್ಮಾ ಮತ್ತು ದೀಪ್ತಿ ಶರ್ಮಾ. ಬದಲಿ ಆಟಗಾರ್ತಿಯಾಗಿ ವಿಶ್ವಕಪ್​ಗೆ ಎಂಟ್ರಿಕೊಟ್ಟಿದ್ದ ಶಫಾಲಿ ವರ್ಮಾ ಮೊದಲು ಬ್ಯಾಟಿಂಗ್​​ನಲ್ಲಿ ಸಿಡಿಲಬ್ಬರದ 87 ರನ್​ಗಳ ಇನ್ನಿಂಗ್ಸ್ ಆಡಿದರೆ, ಬೌಲಿಂಗ್​​ನಲ್ಲೂ ಪ್ರಮುಖ 2 ವಿಕೆಟ್ ಪಡೆದರು. ಇವರ ಜೊತೆಗೆ ತಾನು ಎಂತಹ ಆಲ್​ರೌಂಡರ್ ಎಂಬುದನ್ನು ಮತ್ತೊಮ್ಮೆ ಸಾಭೀತುಪಡಿಸಿದ ದೀಪ್ತ ಶರ್ಮಾ ಮೊದಲು ಬ್ಯಾಟಿಂಗ್​ನಲ್ಲಿ 58 ರನ್​ಗಳ ಇನ್ನಿಂಗ್ಸ್ ಆಡಿದರೆ, ಬೌಲಿಂಗ್​ನಲ್ಲಿ ಐದು ವಿಕೆಟ್ ಪಡೆಯುವುದರ ಜೊತೆಗೆ ಒಬ್ಬರನ್ನು ರನೌಟ್ ಕೂಡ ಮಾಡಿದರು.

ಇಡೀ ವಿಶ್ವಕಪ್​ನಲ್ಲಿ ಟಾಸ್ ಸೋಲುವುದಕ್ಕೆ ಹೆಸರು ವಾಸಿಯಾಗಿದ್ದ ಹರ್ಮನ್‌ಪ್ರೀತ್ ಕೌರ್ ಫೈನಲ್ ಪಂದ್ಯದಲ್ಲೂ ಟಾಸ್ ಸೋತರು. ಆದರೆ ಟಾಸ್ ಸೋತಿದ್ದು ಒಳ್ಳೆಯದ್ದು ಆಯಿತು ಎಂಬುದನ್ನು ಇಡೀ ತಂಡ ತನ್ನ ಸಾಂಘಿಕ ಪ್ರದರ್ಶನದ ಮೂಲಕ ಸಾಭೀತುಪಡಿಸಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡಕ್ಕೆ ಆರಂಭಿಕರಾದ ಶಫಾಲಿ ವರ್ಮಾ ಮತ್ತು ಸ್ಮೃತಿ ಮಂಧಾನ ಉತ್ತಮ ಆರಂಭ ನೀಡಿದರು. ಈ ಇಬ್ಬರು ಮೊದಲ ವಿಕೆಟ್‌ಗೆ 104 ರನ್‌ಗಳ ಜೊತೆಯಾಟ ಆಡಿದರು.

ಈ ಹಂತದಲ್ಲಿ ಸ್ಮೃತಿ ಮಂಧಾನ 45 ರನ್‌ ಗಳಿಸಿ ಔಟಾದರೂ ಶಫಾಲಿ ವರ್ಮಾ ಮಾತ್ರ ತಮ್ಮ ಆಟ ಮುಂದುವರಿಸಿ 87 ರನ್‌ಗಳ ಇನ್ನಿಂಗ್ಸ್ ಆಡುವ ಮೂಲಕ ತಂಡವನ್ನು ಬಲಿಷ್ಠ ಸ್ಥಿತಿಯಲ್ಲಿ ಇರಿಸಿದರು. ಶಫಾಲಿ ಜೊತೆಗೆ ದೀಪ್ತಿ ಶರ್ಮಾ ಕೂಡ ಮಧ್ಯಮ ಕ್ರಮಾಂಕದಲ್ಲಿ ಅದ್ಭುತ ಬ್ಯಾಟಿಂಗ್ ಮಾಡಿ 100ರ ಸ್ಟ್ರೈಕ್ ರೇಟ್‌ನಲ್ಲಿ 58 ರನ್‌ ಬಾರಿಸಿದರು. ವಿಕೆಟ್ ಕೀಪರ್ ರಿಚಾ ಘೋಷ್ 24 ಎಸೆತಗಳಲ್ಲಿ 34 ರನ್‌ಗಳ ಇನ್ನಿಂಗ್ಸ್ ಆಡಿದರು. ಇವರ ಆಟದಿಂದಾಗಿ ತಂಡವು 50 ಓವರ್​ಗಳಲ್ಲಿ 298 ರನ್‌ಗಳನ್ನು ಕಲೆಹಾಕಿತು.

ಈ ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ 246 ರನ್‌ಗಳಿಗೆ ಆಲೌಟ್ ಆಯಿತು. ದೀಪ್ತಿ ಶರ್ಮಾ ಅವರ ಸ್ಪಿನ್ ಮ್ಯಾಜಿಕ್​ಗೆ ಮಕಾಡೆ ಮಲಗಿದ ಆಫ್ರಿಕಾ 52 ರನ್​ಗಳ ಸೋಲೊಪ್ಪಿಕೊಂಡಿತು. ಫೈನಲ್ ಪಂದ್ಯದಲ್ಲಿ ಆಲ್‌ರೌಂಡರ್ ಪ್ರದರ್ಶನ ನೀಡಿದ ದೀಪ್ತಿ ಐದು ವಿಕೆಟ್‌ಗಳನ್ನು ಪಡೆದರು. ಇತ್ತ ದಕ್ಷಿಣ ಆಫ್ರಿಕಾ ಪರ ಏಕಾಂಗಿ ಹೋರಾಟ ನಡೆಸಿದ ನಾಯಕಿ ಲೌರಾ ವೋಲ್ವಾರ್ಡ್ 101 ರನ್‌ಗಳ ಇನ್ನಿಂಗ್ಸ್ ಆಡಿದರಾದರೂ ತಂಡವನ್ನು ಗೆಲುವಿನ ದಡ ಮುಟ್ಟಿಸಲು ಯಶಸ್ವಿಯಾಗಲಿಲ್ಲ.

ಭಾರತ ವನಿತಾ ಪಡೆ 52 ವರ್ಷಗಳ ಮಹಿಳಾ ಏಕದಿನ ವಿಶ್ವಕಪ್ ಇತಿಹಾಸದಲ್ಲಿ ಮೊದಲ ಬಾರಿಗೆ ಏಕದಿನ ವಿಶ್ವಕಪ್ ಪ್ರಶಸ್ತಿ ಗೆದ್ದ ಸಾಧನೆ ಮಾಡಿದೆ. ಹಾಗೆಯೇ ನಾಯಕಿ ಹರ್ಮನ್‌ಪ್ರೀತ್ ಕೌರ್ ಅವರಿಗೂ ಈ ಗೆಲುವು ತುಂಬಾ ವಿಶೇಷವಾಗಿದೆ. ಏಕೆಂದರೆ ಇದಕ್ಕೂ ಮೊದಲು 12 ಐಸಿಸಿ ಟೂರ್ನಮೆಂಟ್‌ಗಳಲ್ಲಿ ಆಡಿದ್ದ ಹರ್ಮನ್​ ಪ್ರತಿ ಬಾರಿಯೂ ಟ್ರೋಫಿ ಎತ್ತಿಹಿಡಿಯಲು ವಿಫಲರಾಗಿದ್ದರು. ಹರ್ಮನ್ 2009, 2013, 2017 ಮತ್ತು 2022ರಲ್ಲಿ ಏಕದಿನ ವಿಶ್ವಕಪ್‌ ಪಂದ್ಯಾವಳಿಯನ್ನು ಆಡಿದ್ದರು. ಹಾಗೆಯೇ 2009, 2010, 2012, 2014, 2016, 2018, 2020 ಮತ್ತು 2023ರಲ್ಲಿ ಟಿ20 ವಿಶ್ವಕಪ್‌ನಲ್ಲಿಯೂ ಭಾಗವಹಿಸಿದ್ದರು. ಆದರೆ ಯಾವ ಐಸಿಸಿ ಟೂರ್ನಿಯಲ್ಲೂ ಟ್ರೋಫಿ ಎತ್ತಿಹಿಡಿದಿರಲಿಲ್ಲ. ಇದೀಗ ಅವರ ಪ್ರಶಸ್ತಿ ಬರ ಕೊನೆಗೂ ನೀಗಿದೆ.

Happy
Happy
0 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *