
ಮಂಗಳೂರು: ನ್ಯಾಷನಲ್ ಹೆರಾಲ್ಡ್ ಪತ್ರಿಕೆ ಭ್ರಷ್ಟಾಚಾರ ಪ್ರಕರಣದಲ್ಲಿ ಮಂಗಳೂರು ಮೂಲದ ಉದ್ಯಮಿ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಆಪ್ತರಾಗಿರುವ ಇನಾಯತ್ ಅಲಿ ಅವರಿಗೂ ನೋಟಿಸ್ ನೀಡಲಾಗಿದೆ ಎಂದು ತಿಳಿದುಬಂದಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಇನಾಯತ್ ಅಲಿ ಮಂಗಳೂರು ಉತ್ತರ ವಿಧಾನಸಭೆ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋತಿದ್ದರು.



ಇ.ಡಿ ನೀಡಿರುವ ದೂರಿನ ಮೇರೆಗೆ ದಿಲ್ಲಿ ಪೊಲೀಸರ ಆರ್ಥಿಕ ಅಪರಾಧ ವಿಭಾಗ ಅ.3ರಂದು ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರ ಮೇಲೆ ಈ ಹಗರಣಕ್ಕೆ ಸಂಬಂಧಿಸಿ ಹೊಸದಾಗಿ ಎಫ್‌ಐಆರ್ ದಾಖಲಿಸಿತ್ತು. ಬಳಿಕ ತನಿಖೆ ಚುರುಕುಗೊಂಡಿದ್ದು, ಅದೇ ಪ್ರಕರಣದಲ್ಲಿ ಡಿಸಿಎಂ ಡಿ.ಕೆ ಶಿವಕುಮಾರ್‌ಗೆ ನೋಟಿಸ್ ನೀಡಲಾಗಿತ್ತು. ಇದರ ಬೆನ್ನಿಗೆ ಡಿಕೆಶಿ ಆಪ್ತ ಇನಾಯತ್ ಅಲಿಗೂ EOW-ದಿಲ್ಲಿ ಪೊಲೀಸ್ ತನಿಖೆಗೆ ಹಾಜರಾಗುವಂತೆ ನೋಟಿಸ್ ನೀಡಿದೆ.
ಮಾಹಿತಿಯ ಪ್ರಕಾರ ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಇ.ಡಿ ಸಂಸ್ಥೆಯಿಂದ ಕಳೆದ ಹಲವು ವರ್ಷಗಳಿಂದ ಸತತವಾಗಿ ಇನಾಯತ್ ಅಲಿ ತನಿಖೆಗೊಳಪಟ್ಟಿದ್ದಾರೆ ಹಾಗೂ ಅದರ ಮುಂದುವರಿದ ಭಾಗವಾಗಿ ಇದೀಗ ದಿಲ್ಲಿ ಪೊಲೀಸರಿಂದ ವಿಚಾರಣೆಗೊಳಪಡುವಂತೆ ನೋಟಿಸ್ ಜಾರಿಯಾಗಿದೆ. ನ್ಯಾಷನಲ್ ಹೆರಾಲ್ಡ್ ಸಂಸ್ಥೆಗೆ ಇನಾಯತ್ ಅಲಿ ಕೂಡಾ ಆರ್ಥಿಕ ಸಹಾಯ ಒದಗಿಸಿದ್ದರು ಎಂದು ತಿಳಿದು ಬಂದಿದೆ.


