
‘ಬೆಂಗಳೂರಿನ ಮುಖ್ಯ ಕೇಂದ್ರಗಳಾದ ವಿಧಾನಸೌಧ, ವಿಕಾಸಸೌಧ, ಮೆಟ್ರೋ ಮತ್ತು ಇಸ್ರೋಗೆ ಎಲ್ಲಿಂದ ವಿದ್ಯುತ್ ಸಂಪರ್ಕ ಇದೆ ಮೆಟ್ರೋ ನಿಲ್ದಾಣ, ಡಿಆರ್‌ಡಿಒ, ಐಐಎಸ್ಸಿ ಬ್ಲಾಸ್ಟ್ ಮಾಡುತ್ತೇನೆ. ಪೊಲೀಸರು ನನ್ನ ಬಂಧಿಸಿದರೆ ಡಿಬಾಸ್ ಪಕ್ಕದ ಸೆಲ್‌ನಲ್ಲಿ ಹಾಕಿ’ ಎಂದು ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಹರಿಬಿಟ್ಟು ಯುವಕನೋರ್ವ ಹುಚ್ಚಾಟ ಮಾಡಿದ ಘಟನೆ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ಪಟ್ಟಣದ ಗಾಂಧಿನಗರದಲ್ಲಿ ನಡೆದಿದೆ.


ಪೃಥ್ಚಿರಾಜ್, ಸ್ಫೋಟಿಸುವ ಬಗ್ಗೆ ಮಾತಾಡಿ ಆತಂಕ ಸೃಷ್ಟಿಸಿದ್ದ ಯುವಕ. ಮೂಲತಃ ಚಳ್ಳಕೆರೆ ಪಟ್ಟಣದ ಗಾಂಧಿನಗರ ನಿವಾಸಿಯಾಗಿರುವ ಯುವಕ ಪೃಥ್ವಿರಾಜ್. ಸಣ್ಣಪುಟ್ಟ ಎಲೆಕ್ಟ್ರಿಕಲ್ ವರ್ಕ್ ಮಾಡಿಕೊಂಡಿದ್ದ ಪೃಥ್ವಿರಾಜ್. ಕಳೆದ ನಾಲ್ಕು ದಿನಗಳ ಹಿಂದೆ ತಾಯಿಗೆ ತಿಳಿಸದೇ ಬೆಂಗಳೂರಿಗೆ ಹೋಗಿದ್ದ ಆಸಾಮಿ. ಇತ್ತ ಮಗ ಮನೆಗೆ ವಾಪಸ್ ಬಾರದ್ದಕ್ಕೆ ಗಾಬರಿಯಾಗಿದ್ದ ತಾಯಿ. ಮನೆ ಸುತ್ತಮುತ್ತ ವಿಚಾರಿಸಿದರೂ ಮಗ ಪತ್ತೆಯಾಗಿರಲಿಲ್ಲ. ಹೀಗಾಗಿ ಪೊಲೀಸ್ ಠಾಣೆಗೆ ತೆರಳಿ ಮಗ ಕಾಣೆಯಾಗಿದ್ದಾನೆ ಹುಡುಕಿಕೊಡುವಂತೆ ದೂರು ಸಲ್ಲಿಸಲು ಹೋಗಿದ್ದಳು. ಆದರೆ ಈ ವೇಳೆ ಪೊಲೀಸರು ದೂರು ಸ್ವೀಕರಿಸದೆ ವಾಪಸ್ ಕಳಿಸಿದ್ದರು ಎಂಬ ಆರೋಪ ಕೇಳಿ ಬಂದಿದೆ.
ಬೆಂಗಳೂರಿನಿಂದ ಮಗ ವಾಪಸ್ ಚಳ್ಳಕೆರೆ ಪಟ್ಟಣಕ್ಕೆ ಬಂದಿದ್ದಾನೆ. ಮಗ ಬಂದ ಬಳಿಕ ತಾಯಿ ದೂರು ಸ್ವೀಕರಿಸದ ಬಗ್ಗೆ ಮಗನ ಮುಂದೆ ಹೇಳಿದ್ದ ತಾಯಿ. ಇದರಿಂದ ಕುಪಿತಗೊಂಡು ಚಳ್ಳಕೆರೆ ಪೊಲೀಸ್ ಠಾಣೆಗೆ ಹೋಗಿದ್ದ ಯುವಕ ನನ್ನ ತಾಯಿ ಕೊಟ್ಟ ದೂರು ಸ್ವೀಕರಿಸದೇ ಯಾಕೆ ವಾಪಸ್ ಕಳಿಸಿದ್ದೀರಿ ಎಂದು ಪ್ರಶ್ನಿಸಿದ್ದ. ಈ ವೇಳೆ ಪೊಲೀಸ್ ಠಾಣೆ ಮುಂದೆಯೇ ವಿಡಿಯೋ ಮಾಡಿ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದ. ಅದಕ್ಕೆ ಪೊಲೀಸರು ಮೊಬೈಲ್ ಆಫ್ ಮಾಡಿ ಆಮೇಲೆ ಕೇಳು ಎಂದು ಹೇಳಿದರೂ ಯುವಕ ಮೊಬೈಲ್ ನಲ್ಲಿ ವಿಡಿಯೋ ರೆಕಾರ್ಡ್ ಮಾಡುತ್ತಲೇ ಪ್ರಶ್ನಿಸಿದ್ದಾನೆ. ಕೊನೆಗೆ ಪೃಥ್ವಿರಾಜ್‌ನನ್ನ ಹಿಡಿದ ಪೊಲೀಸರು ಮೊಬೈಲ್ ಕಸಿದುಕೊಂಡು ಬುದ್ಧಿವಾದ ಹೇಳಿ ಕಳಿಸಿದ್ದಾರೆ.


ಘಟನೆಯ ವಿಡಿಯೋ ಸಾಮಾಜಿಕಜಾಲತಾಣದಲ್ಲಿ ವೈರಲ್ ಆಗಿದ್ದು, ಪರವಿರೋಧ ಕಾಮೆಂಟ್‌ಗಳು ಬಂದಿವೆ. ತಾಯಿ ದೂರು ಸ್ವೀಕರಿಸಿಲ್ಲ ಎಂದು ಸ್ಫೋಟಿಸುವ ಬಗ್ಗೆ ಹೇಳಿಕೆ ನೀಡಿದ ಯುವಕನ ವಿರುದ್ಧ ನೆಟ್ಟಿಗರು ಟೀಕಿಸಿದ್ದಾರೆ. ಈಗೀಗ ಸೋಷಿಯಲ್ ಮೀಡಿಯಾ ಲೈಕ್ ಕಾಮೆಂಟ್‌ಗಳಿಗಾಗಿ ಹುಚ್ಚುಚ್ಚಾಗಿ ವರ್ತಿಸುವ ಖಯಾಲಿ ಯುವಕರಲ್ಲಿ ಹೆಚ್ಚಾಗಿದೆ. ಇನ್ನೊಮ್ಮೆ ಈ ರೀತಿ ಹುಚ್ಚಾಟ ಮಾಡದಂತೆ ತಕ್ಕ ಶಾಸ್ತಿ ಮಾಡಿ ಎಂದು ಗರಂ ಆಗಿರುವ ನೆಟ್ಟಿಗರು.

ವಿಡಿಯೋದಲ್ಲಿ ಏನಿದೆ?
ನಾನು ಕಾಣೆಯಾಗಿದ್ದೇನೆಂದು ನನ್ನ ತಾಯಿ ಪೊಲೀಸ್ ಠಾಣೆಗೆ ದೂರು ನೀಡಲು ಹೋದ್ರೆ ಕಂಪ್ಲೆಂಟ್ ತಗೊಂಡಿಲ್ಲ. ನ್ಯಾಯ ಕೇಳೋಕೆ ಹೋದ್ರೆ ನಾಯಿಗೆ ಹೊಡೆದಂಗ ಹೊಡೆದು ಮೊಬೈಲ್ ಕಸಿದುಕೊಂಡು ವಿಡಿಯೋ ಡಿಲಿಟ್ ಮಾಡಿದ್ದಾರೆ. ಒದ್ದಿದ್ದಾರೆ, ನನ್ನ ಅಮ್ಮನ ಮುಂದೆಯೇ ನಿಂದಿಸಿದ್ದಾರೆ. ಯುನಿಫಾರ್ಮ್ ಹಾಕಿದ ಮಾತ್ರ ಇಷ್ಟಬಂದ ಹಾಗೆ ಹೊಡೆಯಬಹುದ? ನನಗೆ ನ್ಯಾಯ ಬೇಕು. ನ್ಯಾಯಕ್ಕಾಗಿ ಎಸ್‌ಪಿ, ಡಿಸಿ ಆಫೀಸ್‌ಗೆ ಹೋಗ್ತೇನೆ ಅಲ್ಲಿಯೂ ನನ್ನ ಪ್ರಶ್ನೆಗೆ ಉತ್ತರ ಸಿಗದಿದ್ರೆ ಏನು ಮಾಡಬೇಕು ಅಂತಾ ಗೊತ್ತಿದೆ. ನನ್ನ ಬಳಿ ಇಡೀ ಬೆಂಗಳೂರು ಮ್ಯಾಪ್ ಇದೆ. ಡಿಆರ್‌ಡಿಒ, ಐಐಎಎಸ್ಸಿ, ಮೆಟ್ರೋ ಎಲ್ಲ ಕಡೆ ಎಲೆಕ್ಟ್ರಿಕ್ ನಲ್ಲಿ ಕೆಲಸ ಮಾಡಿದ ಅನುಭವ ಇದೆ. ಎಲ್ಲಿ ಪಿನ್ ಇಟ್ರೆ ಎಲ್ಲಿ ಬ್ಲಾಸ್ಟ್ ಆಗುತ್ತೆ ಅಂತಾ ಗೊತ್ತಿದೆ. ನ್ಯಾಯ ಸಿಗದಿದ್ರೆ ಬೆಂಗಳೂರನ್ನೇ ಬ್ಲಾಸ್ಟ್ ಮಾಡಿ ಶಿವಾ ಅನಿಸಿಬಿಡ್ತಿನಿ ಎಂದು ಹುಚ್ಚಾಟ ಮಾಡಿರುವ ಯುವಕ.
ಯುವಕನ ಹುಚ್ಚಾಟದ ವಿಡಿಯೋ ನೋಡಿ ಆತಂಕ ಕ್ಷಣಕಾಲ ಆತಂಕ ಸೃಷ್ಟಿಯಾಗಿತ್ತು. ಇದು ಹಗುರವಾಗಿ ತೆಗೆದುಕೊಳ್ಳಬೇಡಿ. ಅವನು ಮಾನಸಿಕ ಅಸ್ವಸ್ಥನೋ ನಿಜವಾಗಿಯೂ ಅಂತಹ ಕೃತ್ಯಗಳ ಎಸಗುವುದರಲ್ಲಿ ಅನುಮಾನವಿಲ್ಲ. ತಕ್ಕ ಶಾಸ್ತಿ ಮಾಡಿ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಡಿಸಿದ್ದಾರೆ