
ಮಂಗಳೂರು: ಕಾರು ಚಾಲಕನ ನಿರ್ಲಕ್ಷ್ಯದ ಚಾಲನೆಯಿಂದ ಸ್ಕೂಟರ್ ಸವಾರನೊಬ್ಬ ಮೃತಪಟ್ಟಿರುವ ಘಟನೆ ನಗರ ಮಾರ್ನಮಿಕಟ್ಟೆ ಸಮೀಪ ಸಂಭವಿಸಿದೆ.


ಸಾವನ್ನಪ್ಪಿದ ಯುವಕ ಸಚಿನ್ (29) ಎಂದು ತಿಳಿಯಲಾಗಿದೆ.
ತನ್ನ ಸಂಬಂಧಿ ನಿರೀಕ್ಷ್ (14)ನನ್ನು ಸಹ ಸವಾರನನ್ನಾಗಿ ಕುಳ್ಳಿರಿಸಿಕೊಂಡು ಶಕ್ತಿನಗರದಿಂದ ಮಂಗಳಾದೇವಿ ಕಡೆಗೆ ಹೋಗಿದ್ದಾರೆ. ರಾತ್ರಿ 9.10ರ ವೇಳೆಗೆ ಮಾರ್ನಮಿಕಟ್ಟೆಯ ಪೋಸ್ಟ್ ಆಫೀಸ್ ಸಮೀಪ ತಲುಪುತ್ತಿದ್ದಂತೆ ಎದುರುಗಡೆಯಿಂದ ಕಾರೊಂದನ್ನು ಅದರ ಚಾಲಕನು ನಿರ್ಲಕ್ಷ್ಯತನದಿಂದ ಅತಿ ವೇಗವಾಗಿ ಚಲಾಯಿಸುತ್ತಾ ರಸ್ತೆಯ ತೀರಾ ಬಲ ಭಾಗಕ್ಕೆ ಬಂದು ಸ್ಕೂಟರಿಗೆ ಢಿಕ್ಕಿ ಹೊಡೆದು ಸ್ಥಳದಿಂದ ಪರಾರಿಯಾಗಿದ್ದಾನೆ.


ಅಪಘಾತದ ಪರಿಣಾಮ ಸ್ಕೂಟರ್ ಸವಾರ ಸಚಿನ್ ಹಾಗೂ ಹಿಂಬದಿ ಸವಾರ ನಿರೀಕ್ಷ್ ರಸ್ತೆಗೆ ಬಿದ್ದಿದ್ದಾರೆ. ಸಾರ್ವಜನಿಕರು ಚಿಕಿತ್ಸೆಗಾಗಿ ಇಬ್ಬರನ್ನು ಅತ್ತಾವರದ ಆಸ್ಪತ್ರೆಗೆ ದಾಖಲಿಸಿದ್ದು, ಪರೀಕ್ಷಿಸಿದ ವೈದ್ಯರು ಸಚಿನ್ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ನಿರೀಕ್‌ಗೆ ಎಡ ಭುಜಕ್ಕೆ ಗಾಯವಾಗಿದೆ.

ಕದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಘಟನೆ ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ.