
ವಯನಾಡು: ಕೇರಳದಲ್ಲಿ ಭಾರಿ ಮಳೆಯಾಗುತ್ತಿದೆ. ವಯನಾಡು ಜಿಲ್ಲೆಯ ಮೆಪ್ಪಾಡಿ ಬಳಿ ಗುಡ್ಡಗಾಡು ಪ್ರದೇಶದಲ್ಲಿ ಇಂದು (ಮಂಗಳವಾರ) ಮುಂಜಾನೆ 4.30 ರ ಸುಮಾರಿಗೆ ಭಾರಿ ಭೂಕುಸಿತ ಸಂಭವಿಸಿದ್ದು, ಪ್ರಾರ್ಥಮಿಕ ಮಾಹಿತಿ ಪ್ರಕಾರ 31 ಜನ ಈಗಾಗಲೇ ಸಾವನ್ನಪ್ಪಿದ್ದು 100 ಕ್ಕೂ ಅಧಿಕ ಮಂದಿ ಮಣ್ಣಿನಡಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಸಂಭವಿದ್ದು ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ.


ಅಗ್ನಿಶಾಮಕ ದಳ ಮತ್ತು ಎನ್‌ಡಿಆರ್‌ಎಫ್ ತಂಡಗಳು ಸ್ಥಳಕ್ಕೆ ಧಾವಿಸಿದ್ದು, ಹೆಚ್ಚುವರಿ ಎನ್‌ಡಿಆರ್‌ಎಫ್ ತಂಡ ವಯನಾಡ್‌ಗೆ ತೆರಳುತ್ತಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕೆಎಸ್‌ಡಿಎಂಎ ಫೇಸ್‌ಬುಕ್ ಪೋಸ್ಟ್‌ನ ಪ್ರಕಾರ, ಕಣ್ಣೂರಿನ ರಕ್ಷಣಾ ಭದ್ರತಾ ಪಡೆಗಳು ಸಹ ರಕ್ಷಣಾ ಕಾರ್ಯಗಳಲ್ಲಿ ನೆರವಾಗಲು ವಯನಾಡಿಗೆ ತೆರಳಲು ಸೂಚನೆ ನೀಡಲಾಗಿದೆ. ಭಾರಿ ಮಳೆಯಿಂದಾಗಿ ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಗುತ್ತಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.


ದುರ್ಘಟನೆಗೆ ಪ್ರಧಾನಿ ಮೋದಿ ಕಳವಳ :

ಪ್ರಧಾನಿ ನರೇಂದ್ರ ಮೋದಿ ದುರ್ಘಟನೆ ಬಗ್ಗೆ ಕಳವಳ ವ್ಯಕ್ತಪಡಿಸಿದ್ದು ಕೇರಳ ಸಿಎಂ ಪಿಣರಾಯಿ ವಿಜಯನ್ ಗೆ ದೂರವಾಣಿ ಕರೆ ಮಾಡಿ ಕೇಂದ್ರದಿಂದ ಅಗತ್ಯ ಇರುವ ಸಕಲ ನೆರವನ್ನು ನೀಡುವುದಾಗಿ ವಾಗ್ದಾನ ನೀಡಿದ್ದಾರೆ. ಮೃತರಿಗೆ ತಲಾ 2 ಲಕ್ಷ ಹಾಗೂ ಗಾಯಾಳುಗಳಿಗೆ ತಲಾ 50 ಸಾವಿರ ಪರಿಹಾರ ಧನವನ್ನು ಘೋಷಣೆ ಮಾಡಿದ್ದಾರೆ.