
ಉಡುಪಿ ಜಿಲ್ಲಾ ಕುಲಾಲ ಕುಂಬಾರರ ಯುವ ವೇದಿಕೆ, ಕಾರ್ಕಳ ತಾಲೂಕು ಕುಲಾಲ ಯುವ ವೇದಿಕೆ, ಕುಲಾಲ ಸಂಘ ಕಾರ್ಕಳ ಹಾಗೂ ಕುಲಾಲ ಮಹಿಳಾ ಘಟಕ ಕಾರ್ಕಳ ಇವರ ಜಂಟಿ ಆಶ್ರಯದಲ್ಲಿ “ಗೋವಿಗಾಗಿ ಮೇವು” ಎನ್ನುವ ಗೋಗ್ರಾಸ ಅಭಿಯಾನವನ್ನು ಹಮ್ಮಿಕೊಂಡಿದೆ.



ಗಾವೋ ವಿಶ್ವಸ್ಯ ಮಾತರಃ ಎನ್ನುವ ಸಂಸ್ಕ್ರತದ ಉಕ್ತಿಯೊಂದು ಗೋವು ಜಗತ್ತಿನ ತಾಯಿ ಎನ್ನುವುದನ್ನು ಸಾರಿ ಹೇಳಿದೆ. ಅದೆಷ್ಟೋ ತಬ್ಬಲಿ ಮಕ್ಕಳಿಗೆ ಜೀವಾಮೃತ ಉಣಿಸಿ ಮಾತೆ ಅನ್ನಿಸಿ ಕೊಂಡ ಗೋ ಸಮೂಹ ಇಂದು ತನ್ನ ಅಸ್ತಿತ್ವವನ್ನು ದರೆಯಲ್ಲಿ ಹುಡುಕಾಡುವ ಸ್ಥಿತಿಯಲ್ಲಿದೆ. ಇದಕ್ಕೆ ಮೂಲ ಕಾರಣ ಸ್ವಾರ್ಥಿ ಮಾನವನ ವಿಸ್ತರಣಾವಾದಿ ಧೋರಣೆ. ಪರಿಣಾಮ ಅಗಾಧವಾದ ಬಯಲು ಪ್ರದೇಶದ ಹಸಿರು ಹುಲ್ಲುಗಾವಲುಗಳು ವಿವಿಧ ಕೈಗಾರಿಕೋದ್ಯಮ ಇನ್ನಿತರ ಅಭಿವೃದ್ಧಿಯೆಂಬ ಹಣೆಪಟ್ಟಿಯಲ್ಲಿ ದಿಗ್ಬಂಧನಕ್ಕೆ ಒಳಪಟ್ಟಾಗ ಕೇವಲ ಹುಲ್ಲನ್ನಷ್ಟೇ ತಿಂದು ಬದುಕುವ ಗೋ ಸಮೂಹದ ವ್ಯಥೆಯ ಕಥೆ ಹೇಳ ತೀರದು.

ಇದಲ್ಲದೆ ನಾಗರೀಕ ಎನ್ನುವ ಅನಾಗರಿಕ ಪದ್ಧತಿಯಲ್ಲಿ ಬದುಕು ಕಟ್ಟಿಕೊಂಡಿರುವ ಮನುಜ ತನ್ನ ಅನುಕೂಲಕ್ಕೆಂದೇ ಸೃಜಿಸಿದ ಪ್ಲಾಸ್ಟಿಕ್ ಎಂಬ ರಾಕ್ಷಸ ಇಳೆಯನ್ನು ಮೈಲಿಗೆ ಮಾಡುತಿರುವುದಲ್ಲದೆ ಅಸಂಖ್ಯ ಗೋಮಾತೆಯರ ಮಾರಣ ಹೋಮಕ್ಕೂ ಕಾರಣವಾಗಿದೆ. ಮಾನವನ ಇಂತಹ ನೂರಾರು ಅಪಸವ್ಯಗಳ ನಡುವೆ ಬದುಕಿಗಾಗಿ ಹೆಣಗಾಡುವ ಗೋ ಸಮೂಹದ ಉನ್ನತಿಗಾಗಿ ಅಲ್ಲಲ್ಲಿ ಹುಟ್ಟಿಕೊಂಡ ಗೋಶಾಲೆಗಳು ಗೋ ಮಾತೆಯರ ಪಾಲಿಗೆ ಮರಳುಗಾಡಿನ ಓಯಸಿಸ್ ಗಳಾದರೆ ಗೋಶಾಲೆಯ ನಿತ್ಯದ ಖರ್ಚನ್ನು ನಿಭಾಯಿಸಲು ಆಗದೆ ಗೋಶಾಲೆಯ ಉಸ್ತುವಾರಿ ವಹಿಸಿ ಕೊಂಡವರ ಪಾಡಂತೂ “ಅತ್ತದರಿ ಇತ್ತು ಪುಲಿ” ಎನ್ನುವಂತೆ ಆಗಿದೆ.



ಇದನ್ನೆಲ್ಲಾ ಮನಗಂಡು ಕಾರ್ಕಳ ಕುಲಾಲ ಯುವ ವೇದಿಕೆಯು ದಿನಾಂಕ 08/12/2024 ರವಿವಾರದಂದು “ಗೋವಿಗಾಗಿ ಮೇವು” ಎಂಬ ಗೋಗ್ರಾಸ ಸಂಗ್ರಹದ ಅಭಿಯಾನಕ್ಕೆ ಮುಂದಡಿ ಇಟ್ಟಿದೆ. ಗೋ ಮಾತೆಯರ ಕಣ್ಣೀರ ಶಾಪಕ್ಕೆ ತುತ್ತಾದ ಮನುಕುಲಕ್ಕೆ ಪಶ್ಚಾತ್ತಾಪದಿಂದ ಪ್ರಾಯಶ್ಚಿತ್ತ ಮಾಡಿಕೊಳ್ಳಲು ಒಂದು ಸದಾವಕಾಶ. ಅಲ್ಲದೆ ನಮಗರಿಯದೆ ಆಗಿರುವ ತಪ್ಪಿಗೆ ಪ್ರಾಯಶ್ಚಿತ್ತ ರೂಪವಾಗಿ ಆತ್ಮೋನ್ನತಿಯ ಒಂದು ದಿವ್ಯ ಮಾರ್ಗವಾಗಿ ಗೋಚರಿಸಿದ ಈ ಗೋಗ್ರಾಸ ಕೈಂಕರ್ಯದಲ್ಲಿ ಜೊತೆಗೂಡಿ ಒಂದು ರೋಲ್ ಗೋಗ್ರಾಸದ ಖರ್ಚು ₹ 250/-ಕೊಟ್ಟು ಸಹಕರಿಸುವ ಮೂಲಕ ಗೋವಿನ ಮೇವು ಅಭಿಯಾನದ ಯಶಸ್ಸಿಗಾಗಿ ಹರಸಬೇಕಾಗಿದೆ.
ಕೊನೆಯದಾಗಿ ಗೋವಿನ ಬಗ್ಗೆ
ವೈಜ್ಞಾನಿಕವಾಗಿ ಶೃತಪಟ್ಟ ಬಲ್ಲವರಿಂದ ಪಸರಿದ ವಿಚಾರವೆಂದರೆ ನಿರಂತರ 30 ದಿನಗಳ ತನಕ ಗೋವಿಗೆ ವಿಷವನ್ನೇ ತಿನ್ನಿಸಿದರೂ ಗೋವಿನ ಕೆಚ್ಚಲಿನಿಂದ ಬರುವ ಹಾಲಿನಲ್ಲಿ ಎಳ್ಳಿನಂಶದಷ್ಟೂ ವಿಷವಿರದು ಎಂಬುವುದೇ ಸತ್ಯ.


84 ಲಕ್ಷ ಕೋಟಿ ಜೀವರಾಶಿಯಲ್ಲಿ ಗೋವಿಗೇಕೆ ಶ್ರೇಷ್ಠ ಸ್ಥಾನ ಎನ್ನಲು ಸೂರ್ಯ ಕೇತು ನಾಡಿ ಎಂಬ ಗೋಮಾತೆಯ ಶಾರೀರಿಕ ವಿಶೇಷತೆಯ ಬಗ್ಗೆ ಪುಟ್ಟ ಮಾಹಿತಿ..
ಭಾರತೀಯ ಗೋವಿನ ಬೆನ್ನು ಹುರಿಯಲ್ಲಿ “ಸೂರ್ಯ ಕೇತು ನಾಡಿ” ಎಂಬ ದೈವೀಕ ನಾಡಿಯಿದೆ. ಈ ಸೂರ್ಯ ನಾಡಿ ಬ್ರಹ್ಮಾಂಡದಲ್ಲಿರುವ ಶಕ್ತಿಯುತ ತರಂಗಗಳನ್ನು ಹೀರಿಕೊಂಡು ಗೋವನ್ನು ಕಾಮಧೇನುವಾಗಿಸುತ್ತದೆ. ಆದ್ದರಿಂದಲೇ ಭಾರತೀಯ ಗೋವಿನ ಉತ್ಪನ್ನಗಳಾದ ಹಾಲು, ಮೊಸರು ಮತ್ತು ತುಪ್ಪಗಳಲ್ಲಿ ಬಂಗಾರದ ಕಣಗಳಿದ್ದು ಕಿಂಚಿತ್ ಹಳದೀ ಬಣ್ಣದಲ್ಲಿ ಕಂಗೊಳಿಸುತ್ತವೆ.
ಉತ್ತರ ಭಾರತೀಯರಲ್ಲಿ ಇಂದಿಗೂ ಮುಂಜಾನೆ ಗೋಗ್ರಾಸ ನೀಡದ ವಿನಃ ಅನ್ನ ಪಾನೀಯಗಳ ಸೇವಿಸುವ ಪದ್ಧತಿ ಇಲ್ಲ. ನಮ್ಮರಿವಿಗೆ ಈ ಮಾಹಿತಿ ಆದರೂ ನಿತ್ಯ ಬಂಧನದಲ್ಲಿ ಇಟ್ಟಂತೆ ಗೋವನ್ನು ಕಟ್ಟಿ ಹಾಕಿ ಮನಸ್ಸು ವಿಚಲಿತಗೊಂಡಾಗ ಎರಡೇಟು ಕೊಟ್ಟರೂ ಸದಾಕಾಲ ತನ್ನೊಡೆಯನಿಗೆ ಶ್ರೇಯಸ್ಸು ಬಯಸುವ ಇಳೆಯಲ್ಲಿರುವ ಏಕೈಕ ಜೀವಿ ಎಂದರೆ ಅದು ಗೋಮಾತೆ ಮಾತ್ರ. ಅದಕ್ಕೆ ಅದು ಗೋ ಮಾತೆ
ಗೋಗ್ರಾಸದ ಪುಣ್ಯ ಸಂಚಯನದಿಂದ ನಮ್ಮ ಜನ್ಮ ಜನ್ಮಾಂತರಗಳ ಪಾಪಗಳು ನಶಿಸಲಿ ಎಂಬುದು ಕುಲಾಲ ಯುವ ವೇದಿಕೆ ಕಾರ್ಕಳ ಇವರ ಆಗ್ರಹ.