
ಮಂಗಳೂರು: ಬೈಕ್ನಲ್ಲಿ ಬಂದ ಯುವಕನೊಬ್ಬ 74 ವರ್ಷದ ವೃದ್ಧೆಯ ಕತ್ತಿನಲ್ಲಿದ್ದ ಸುಮಾರು 3 ಲಕ್ಷ ರೂ. ಮೌಲ್ಯದ ಚಿನ್ನದ ಸರ ಕಸಿದು ಪರಾರಿಯಾಗಿದ್ದು, ಘಟನೆಯಲ್ಲಿ ವೃದ್ಧೆ ಗಾಯಗೊಂಡಿರುವ ಘಟನೆ ಮುಲ್ಕಿ ಪೋಸ್ಟ್ ಆಫೀಸ್ ಬಳಿಯ ಅಕ್ಕಸಾಲಿಗರ ಕೇರಿ ವೀರ ಮಾರುತಿ ದೇವಸ್ಥಾನದ ಸಮೀಪದ ಒಳ ರಸ್ತೆಯಲ್ಲಿ ನಡೆದಿದೆ.


ಗಾಯಗೊಂಡ ವೃದ್ಧೆಯನ್ನು ಪೋಸ್ಟ್ ಆಫೀಸ್ ಬಳಿಯ ನಿವಾಸಿ ನಳಿನಿ ಎ ನಾಯಕ್ ಎಂದು ಗುರುತಿಸಲಾಗಿದ್ದು, ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.
ಮಧ್ಯಾಹ್ನದ ಊಟದ ಬಳಿಕ ನಳಿನಿಯವರು ಎಂದಿನಂತೆ ವಾಕಿಂಗ್ಗೆ ಹೋಗಲು ಸಿದ್ಧರಾಗಿ ಗೇಟ್ ಬಳಿ ಬಂದಿದ್ದರು. ಈ ವೇಳೆ ಬೈಕ್ನಲ್ಲಿ ಬಂದ ಯುವಕನೊಬ್ಬ ಮುಲ್ಕಿ ಕಡೆಯಿಂದ ಬಂದು, ನಾಗೇಶ್ ರಾವ್ ಅವರ ಮನೆ ಎಲ್ಲಿದೆ ಎಂದು ವಿಚಾರಿಸಿದ್ದಾನೆ. ತನಗೆ ಗೊತ್ತಿಲ್ಲ ಎಂದು ಉತ್ತರಿಸಿದ ನಳಿನಿಯವರು, ವೀರ ಮಾರುತಿ ದೇವಸ್ಥಾನಕ್ಕೆ ಹೋಗುವ ಒಳ ರಸ್ತೆಯಲ್ಲಿ ನಡೆದು ಹೋಗುತ್ತಿದ್ದರು.


ಆ ಯುವಕ ಬೈಕ್ನಲ್ಲಿ ಅವರನ್ನು ಹಿಂಬಾಲಿಸಿ, ರಸ್ತೆಯ ಮೇಲಿದ್ದ ನೀರಿನ ಟ್ಯಾಂಕ್ ಬಳಿ ತಡೆದು, ಚಾಕು ತೋರಿಸಿ ಸರಕ್ಕಾಗಿ ಬೇಡಿಕೆ ಇಟ್ಟಿದ್ದಾನೆ. ಆತ್ಮರಕ್ಷಣೆಗಾಗಿ ನಳಿನಿಯವರು ತಮ್ಮ ಕೊಡೆಯಿಂದ ಆತನ ಕೈಗೆ ಹೊಡೆದಾಗ, ಆತ ಅವರನ್ನು ತಳ್ಳಿ, ಚಿನ್ನದ ಸರವನ್ನು ಕಸಿದು ವೇಗವಾಗಿ ಪರಾರಿಯಾಗಿದ್ದಾನೆ.

ತಕ್ಷಣವೇ ಮನೆಗೆ ಮರಳಿದ ನಳಿನಿಯವರು ಪೊಲೀಸರಿಗೆ ವಿಷಯ ತಿಳಿಸಿದರು. ನಂತರ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ಆ ಯುವಕ ರಾಷ್ಟ್ರೀಯ ಹೆದ್ದಾರಿಯಲ್ಲಿ ಉಡುಪಿ ಕಡೆಗೆ ಪರಾರಿಯಾಗಿರುವುದು ತಿಳಿದುಬಂದಿದೆ.
ಮುಲ್ಕಿ ಪಟ್ಟಣ ಪಂಚಾಯತ್ ಅಧ್ಯಕ್ಷ ಸತೀಶ್ ಅಂಚನ್ ಮತ್ತು ಸದಸ್ಯ ಸುಭಾಷ್ ಶೆಟ್ಟಿ ಅವರು ಸ್ಥಳಕ್ಕೆ ಭೇಟಿ ನೀಡಿದರು. ಮುಲ್ಕಿ ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.