
ಉಡುಪಿ : ನನ್ನ ಗಂಡ ತೀರಿಕೊಂಡಿದ್ದು, ನನ್ನ ಗಂಡನ ಆಸ್ತಿ ಭೂಮಿ ಅನ್ಯಾಯವಾಗಿ ಕುಟುಂಬದ ಪಾಲಾಗಿ ನಾನು ಬೀದಿ ಪಾಲಾಗಿದ್ದೇನೆ. ನನಗೆ ಆಶ್ರಯ ನೀಡಿ ಎಂದು ದುಃಖಿಸಿದ ಮಹಿಳೆಯನ್ನು ವಿಶು ಶೆಟ್ಟಿ ಅಂಬಲಪಾಡಿ ರಕ್ಷಿಸಿ ಸಖಿ ಸೆಂಟರಿಗೆ ದಾಖಲಿಸಿದ ಮಾನವೀಯ ಘಟನೆ ನಡೆದಿದೆ.


ಮಹಿಳೆ ಮಂಜಿ ಕುಲಾಲ್(75) ಗಂಡ ಕಾಲ ಕುಲಾಲ್ ರಾಗಿಜೆಡ್ಡು ಬೆಳ್ಳಾಳ ಕುಂದಾಪುರ ಮೂಲದವರಾಗಿದ್ದು, ಉಡುಪಿ ಕರಾವಳಿ ಬೈಪಾಸ್ ರಸ್ತೆ ಬಳಿ ದುಃಖಿಸುತ್ತಿದ್ದ ಮಾಹಿತಿ ಪಡೆದ ವಿಶು ಶೆಟ್ಟಿ ರಕ್ಷಿಸಿದ್ದಾರೆ. ಮಹಿಳೆಯು ತನ್ನ ಒಪ್ಪಿಗೆ ಇಲ್ಲದೆ ನನ್ನ ಗಂಡನ ಆಸ್ತಿಯನ್ನು ನಕಲಿ ದಾಖಲಾತಿಯಿಂದ ಅವರದಾಗಿಸಿಕೊಂಡು ಮೋಸ ಮಾಡಿದ್ದಾರೆ ಎಂದು ದುಃಖಿಸಿದ್ದಾರೆ. ಈ ಬಗ್ಗೆ ಜಿಲ್ಲಾಡಳಿತ ಹಾಗೂ ಸಂಬಂಧಪಟ್ಟ ಮಹಿಳಾ ಪರ ಇಲಾಖೆ, ಹಿರಿಯ ನಾಗರಿಕ ಸಹಾಯವಾಣಿ ತುರ್ತು ಕ್ರಮ ಜರುಗಿಸಿ ಮಹಿಳೆಯ ಮುಂದಿನ ಜೀವನಕ್ಕೆ ದಾರಿ ಮಾಡಿಕೊಡಬೇಕಾಗಿ ವಿಶು ಶೆಟ್ಟಿ ಆಗ್ರಹಿಸಿದ್ದಾರೆ.
ಈ ಎಲ್ಲಾ ಘಟನೆಯ ಸತ್ಯಾಸತ್ಯತೆ ಬಗ್ಗೆ ವಿಶು ಶೆಟ್ಟಿಯವರು ಸ್ಥಳೀಯರಾದ ನರಸಿಂಹ ಕುಲಾಲ್ ಅವರನ್ನು ಮಾತನಾಡಿಸಿದಾಗ ವೃದ್ದೆಗೆ ಮೋಸ ಆಗಿದ್ದು ನಿಜ, ಈ ಬಗ್ಗೆ ನಾನು ಮಾಹಿತಿ ಹಕ್ಕಿನಿಂದ ಎಲ್ಲಾ ದಾಖಲಾತಿ ಪಡೆದಿದ್ದೇನೆ ಎಂದು ಮಾಹಿತಿ ನೀಡಿದ್ದಾರೆ.
ನನಗೆ ಆಸ್ತಿ ಭೂಮಿ ಬೇಡ, ಕುಟುಂಬಸ್ಥರು ಅನುಭವಿಸಲಿ. ನನ್ನ ಜೀವಿತಾವಧಿಯವರೆಗೆ ನನಗೆ ಮಕ್ಕಳಿಲ್ಲದ ಕಾರಣ ನೆಮ್ಮದಿಯ ಜೀವನಕ್ಕೆ ಸಹಕರಿಸಲಿ. ನಾನು ಬೀದಿಪಾಲಾಗಿ ಜೀವನ ನಡೆಸುವುದಕ್ಕಿಂತ ಆತ್ಮಹತ್ಯೆಗೆ ಶರಣಾಗುವೆ.


ಮಂಜಿ ಕುಲಾಲ್
ನೊಂದ ಮಹಿಳೆ .
