
ಮಂಗಳೂರು : ಇಸ್ರೇಲ್ ಮತ್ತು ಇರಾನ್ ನಡುವೆ ಯುದ್ಧ ದಿನದಿಂದ ದಿನಕ್ಕೆ ಬಿಗಡಾಯಿಸುತ್ತಿದೆ. ಇವೆಲ್ಲದರ ನಡುವೆಯು ಇಸ್ರೇಲ್‌ನಲ್ಲಿ ಉದ್ಯೋಗ ನೀಡುವುದಾಗಿ ಆಮೀಷವೊಡ್ಡಿ ಕೇರಳ ಮೂಲದ ಏಜೆನ್ಸಿಯೊಂದು ಉದ್ಯೋಗಾಕಾಂಕ್ಷಿಗಳಿಗೆ ವಂಚಿಸಿರುವ ಆರೋಪ ಕೇಳಿಬಂದಿದೆ.


ಇಸ್ರೇಲ್‌ನ ಕಂಪೆನಿಯೊಂದರಲ್ಲಿ ಉದ್ಯೋಗ ನೀಡುವುದಾಗಿ ನಂಬಿಸಿ ಪಾಸ್‌ಪೋರ್ಟ್ ಮತ್ತು ಹಣ ಪಡೆದ ಕೇರಳ ಮೂಲದ ಏಜೆನ್ಸಿಯೊಂದು ಮಂಗಳೂರು ಮತ್ತು ಉಡುಪಿ ಜಿಲ್ಲೆಯ 130 ಮಂದಿ ಸೇರಿದಂತೆ ದೇಶದ ಸಾವಿರಾರು ಮಂದಿ ಉದ್ಯೋಗಾಕಾಂಕ್ಷಿಗಳಿಗೆ ವಂಚಿಸಿರುವುದು ಬೆಳಕಿಗೆ ಬಂದಿದೆ.
ಮಂಗಳೂರಿನಲ್ಲಿನ ಕನ್ಸಲ್ಟೆನ್ಸಿ ಯೊಂದರ ರೋಹಿತ್ ಎಂಬವರು, ತಮ್ಮ ಬಳಿ 130 ಮಂದಿ ಕೊಟ್ಟಿದ್ದ ಪಾಸ್‌ಪೋರ್ಟ್‌ಗಳನ್ನು ಕೇರಳ ಮೂಲದ ಸ್ಪೇಸ್ ಇಂಟರ್‌ನ್ಯಾಶನಲ್ ಎಂಬ ಏಜೆನ್ಸಿಯವರಿಗೆ ನೀಡಿದ್ದಾರೆ. ಪಾಸ್‌ಪೋರ್ಟ್ ನೀಡಿದ ನಂತರ ಸುಮಾರು 20 ದಿನಗಳಲ್ಲಿ ಇಸ್ರೇಲ್‌ನಿಂದ ಕೊಹೇನ್ ಎಂಪ್ಲಾಯ್‌ಮೆಂಟ್ ಗ್ರೂಪ್ ಎಂಬ ಕಂಪನಿ ಹೆಸರಿನಿಂದ ಆಫರ್ ಲೆಟರ್ ಬಂದಿದೆ. ಆಫರ್ ಲೆಟರ್‌ನ ಬಗ್ಗೆ ಇಸ್ರೇಲ್‌ನಲ್ಲಿರುವ ತಮ್ಮ ಗೆಳೆಯನಿಗೆ ವಿಷಯ ತಿಳಿಸಿದ್ದಾರೆ. ಆಗ ಅವರ ಗೆಳೆಯ ಕೊಹೇನ್ ಎಂಪ್ಲಾಯ್‌ಮೆಂಟ್ ಗ್ರೂಪ್ ಎಂಬ ಕಂಪನಿಯ ಬಗ್ಗೆ ಪರಿಶೀಲನೆ ಮಾಡಿದಾಗ ಆ ಹೆಸರಿನ ಕಂಪನಿಯೆ ಅಸ್ತಿತ್ವದಲ್ಲಿಲ್ಲ ಎಂಬುದು ತಿಳಿದು ಬಂದಿದೆ.


ಹಾಗಾಗಿ, ಕೇರಳ ಮೂಲದ ಏಜೆನ್ಸಿಯಾದ ಸ್ಪೇಸ್ ಇಂಟರ್‌ನ್ಯಾಶನಲ್‌ನವರ ಬಳಿ ಪಾಸ್‌ಪೋರ್ಟ್‌ಗಳನ್ನು ವಾಪಸ್ ನೀಡುವಂತೆ ಕೇಳಿದ್ದಾರೆ. ಆದರೆ, ಸ್ಪೇಸ್ ಇಂಟರ್‌ನ್ಯಾಶನಲ್ ಏಜೆನ್ಸಿನವರು ಪಾಸ್‌ಪೋರ್ಟ್ ವಾಪಸ್ ಬೇಕಾದರೆ 60,000 ರೂ. ನೀಡಬೇಕು ಎಂದು ಬೆದರಿಸಿದ್ದಾರೆಂದು, ಸಂತ್ರಸ್ಥರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಕೇರಳ ಮೂಲದ ಸ್ಪೇಸ್ ಇಂಟರ್‌ನ್ಯಾಶನಲ್ ಎಂಬ ಏಜೆನ್ಸಿಯವರ ವಿರುದ್ದ ಪ್ರಕರಣ ದಾಖಲಾಗಿದೆ.
