
ಮಧ್ಯಪ್ರಾಚ್ಯದಲ್ಲಿ ಶಾಂತಿಯತ್ತ ಮಹತ್ವದ ಹೆಜ್ಜೆಯಾಗಿ, ಇಸ್ರೇಲ್ ಮತ್ತು ಹಮಾಸ್ ಗಾಝಾ ಕದನ ವಿರಾಮ ಯೋಜನೆಯ ಮೊದಲ ಹಂತಕ್ಕೆ ಒಪ್ಪಂದ ಮಾಡಿಕೊಂಡಿವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಧಿಕೃತವಾಗಿ ಘೋಷಿಸಿದ್ದಾರೆ.


ಟ್ರಂಪ್ ಅವರು ಸಾಮಾಜಿಕ ಮಾಧ್ಯಮದ ಮೂಲಕ ಹಂಚಿಕೊಂಡಿರುವ ಪೋಸ್ಟ್ ನಲ್ಲಿ, “ಇಸ್ರೇಲ್ ಮತ್ತು ಹಮಾಸ್ ನಡುವೆ ಗಾಝಾದ ಕದನ ವಿರಾಮದ ಮೊದಲ ಹಂತಕ್ಕೆ ಒಪ್ಪಂದ ತಲುಪಿದೆ. ಇದು ಶಾಂತಿಯ ಪ್ರಾರಂಭದ ಹೊಸ ಅಧ್ಯಾಯವಾಗಿದೆ” ಎಂದು ಹೇಳಿದ್ದಾರೆ. ಈ ವಾರಾಂತ್ಯದಲ್ಲಿ ಕದನ ವಿರಾಮ ಒಪ್ಪಂದಕ್ಕೆ ಸಹಿ ಹಾಕಲು ಈಜಿಪ್ಟ್‌ಗೆ ಭೇಟಿ ನೀಡಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಕದನ ವಿರಾಮ ಮಾತುಕತೆಯಲ್ಲಿ ಪ್ರಮುಖ ಮಧ್ಯವರ್ತಿಯಾಗಿದ್ದ ಖತರ್, “ಒಪ್ಪಂದದ ಮೊದಲ ಹಂತದ ಎಲ್ಲಾ ಷರತ್ತುಗಳು ಮತ್ತು ಅನುಷ್ಠಾನ ಕ್ರಮಗಳ ಕುರಿತು ಸ್ಪಷ್ಟತೆಗೆ ತಲುಪಲಾಗಿದೆ” ಎಂದು ಅಧಿಕೃತ ಪ್ರಕಟಣೆ ಹೊರಡಿಸಿದೆ.


ಹಮಾಸ್ ತನ್ನ ಪ್ರಕಟಣೆಯಲ್ಲಿ, “ಗಾಝಾದ ಮೇಲಿನ ಯುದ್ಧವನ್ನು ಕೊನೆಗೊಳಿಸುವುದು, ಆಕ್ರಮಣವನ್ನು ಹಿಂತೆಗೆದುಕೊಳ್ಳುವುದು, ಮಾನವೀಯ ಸಹಾಯದ ನಿರ್ವಿಘ್ನ ಪ್ರವೇಶ ಹಾಗೂ ಕೈದಿಗಳ ವಿನಿಮಯಕ್ಕೆ ಸಂಬಂಧಿಸಿದ ಷರತ್ತುಗಳ ಮೇಲೆ ಒಪ್ಪಂದ ಮಾಡಿಕೊಳ್ಳಲಾಗಿದೆ” ಎಂದು ತಿಳಿಸಿದೆ.

ಇದೇ ವೇಳೆ, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಗುರುವಾರ ಸರ್ಕಾರದ ತುರ್ತು ಸಭೆಯನ್ನು ಕರೆಯುವ ಮೂಲಕ ಕದನ ವಿರಾಮ ಒಪ್ಪಂದವನ್ನು ಅನುಮೋದಿಸಲು ಮುಂದಾಗಿದ್ದಾರೆ. “ಇದು ಇಸ್ರೇಲ್‌ಗೆ ಒಳ್ಳೆಯ ದಿನವಾಗಿದೆ. ನಮ್ಮ ಎಲ್ಲಾ ಒತ್ತೆಯಾಳುಗಳನ್ನು ವಾಪಸ್ ಕರೆತರಲು ಸರ್ಕಾರ ಬದ್ಧವಾಗಿದೆ” ಎಂದು ಅವರು ಪ್ರತಿಕ್ರಿಯಿಸಿದ್ದಾರೆ.
2023ರ ಅಕ್ಟೋಬರ್ ನಿಂದ ಇಸ್ರೇಲ್ ನಡೆಸಿದ ಗಾಝಾ ಯುದ್ಧದಲ್ಲಿ ಕನಿಷ್ಠ 67,183 ಮಂದಿ ಮೃತಪಟ್ಟಿದ್ದು, 169,841 ಮಂದಿ ಗಾಯಗೊಂಡಿದ್ದಾರೆ ಎಂದು ಫೆಲೆಸ್ತೀನ್ ನ ಆರೋಗ್ಯ ಇಲಾಖೆಯ ಅಂಕಿಅಂಶಗಳು ಹೇಳಿವೆ. ಇನ್ನೂ ಹೆಚ್ಚಿನ ಜನರು ನಾಶವಾದ ಕಟ್ಟಡಗಳ ಅವಶೇಷಗಳ ಅಡಿಯಲ್ಲಿ ಸಿಲುಕಿರುವ ಸಾಧ್ಯತೆಯಿದೆ. 2023ರ ಅಕ್ಟೋಬರ್ 7ರಂದು ಹಮಾಸ್ ನಡೆಸಿದ ದಾಳಿಯಲ್ಲಿ ಇಸ್ರೇಲ್‌ನಲ್ಲಿ 1,139 ಮಂದಿ ಸಾವನ್ನಪ್ಪಿದರು. ಸುಮಾರು 200 ಮಂದಿಯನ್ನು ಹಮಾಸ್ ಒತ್ತೆಯಾಳುಗಳಾಗಿರಿಸಿಕೊಂಡಿತು.