
ಮಂಗಳೂರು: ನಗರದ ಲಾಲ್‌ಬಾಗ್‌ನಲ್ಲಿರುವ ವಾಣಿಜ್ಯ ಸಂಕೀರ್ಣವೊಂದರ ಅಂಗಡಿಯಲ್ಲಿ ಅಕ್ರಮವಾಗಿ ಇ-ಸಿಗರೇಟ್ ಹಾಗೂ ಪರವಾನಗಿ ರಹಿತ ವಿದೇಶಿ ಸಿಗರೇಟ್‌ಗಳನ್ನು ಮಾರಾಟ ಮಾಡುತ್ತಿದ್ದ ಜಾಲವನ್ನು ಮಂಗಳೂರು ನಗರ ಪೊಲೀಸರು ಭೇದಿಸಿದ್ದಾರೆ. ಸುಮಾರು ರೂ. 9,72,745/- ಮೌಲ್ಯದ ನಿಷೇಧಿತ ವಸ್ತುಗಳನ್ನು ವಶಪಡಿಸಿಕೊಂಡು, ಅಂಗಡಿಯ ಮಾಲಕ ಸೇರಿ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.


ಸಂತೋಷ್ (32), ವಾಸ: ಗಣೇಶ್ ಕೋಡಿ ಹೌಸ್, ಬಂಟ್ವಾಳ ತಾಲೂಕು, ಇಬ್ರಾಹಿಂ ಇರ್ಷಾದ್ (33), ವಾಸ: ಜಾಮೀಯಾ ಮಸೀದಿ ಬಳಿ, ಕುದ್ರೋಳಿ, ಮಂಗಳೂರು ಮತ್ರು ಶಿವು ದೇಶಕೋಡಿ (ಶಾಪ್‌ನ ಮಾಲಕ) ಬಂಧಿತರು.
ಲಾಲ್‌ಬಾಗ್‌ನ ಸಾಯಿಬೀನ್ ಕಾಂಪ್ಲೆಕ್ಸ್‌ನಲ್ಲಿರುವ ‘ಆಮಂತ್ರಣ’ ಎಂಬ ಹೆಸರಿನ ಅಂಗಡಿಯಲ್ಲಿ ಯುವಕ-ಯುವತಿಯರಿಗೆ ನಿಷೇಧಿತ ಇ-ಸಿಗರೇಟ್‌ಗಳು, ಕಾನೂನುಬಾಹಿರವಾಗಿ ಸಂಗ್ರಹಿಸಿದ ಸ್ವದೇಶಿ-ವಿದೇಶಿ ಸಿಗರೇಟ್‌ಗಳು ಮತ್ತು ಹುಕ್ಕಾ ಸೇವನೆಯ ಸಾಧನಗಳನ್ನು ಮಾರಾಟ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಈ ಕಾರ್ಯಾಚರಣೆ ನಡೆಸಲಾಗಿದೆ.


ಬರ್ಕೆ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ಶ್ರೀ ಮೋಹನ್ ಕೊಟ್ಟಾರಿ ನೇತೃತ್ವದ ತಂಡವು ದಿನಾಂಕ 06-10-2025 ರಂದು ಸಂಜೆ ದಾಳಿ ನಡೆಸಿತು. ದಾಳಿಯ ವೇಳೆ, ಅಂಗಡಿಯಲ್ಲಿ ಬೃಹತ್ ಪ್ರಮಾಣದ ನಿಷೇಧಿತ ವಸ್ತುಗಳು ಪತ್ತೆಯಾಗಿವೆ.

ವಶಪಡಿಸಿಕೊಂಡ ವಸ್ತುಗಳ ವಿವರ:
ಇ-ಸಿಗರೇಟ್‌ಗಳು: ವಿವಿಧ ಕಂಪನಿಗಳ ಒಟ್ಟು 847 ಇ-ಸಿಗರೇಟ್‌ಗಳು (ಅಂದಾಜು ಮೌಲ್ಯ: ರೂ. 4,43,125/-).
ಸಿಗರೇಟ್‌ಗಳು: ಸಿಗರೇಟ್ ಪ್ಯಾಕ್‌ನ ಮೇಲೆ ಕಡ್ಡಾಯವಾಗಿ ಪ್ರದರ್ಶಿಸಬೇಕಾದ 85% ದುಷ್ಪರಿಣಾಮದ ಚಿತ್ರವಿಲ್ಲದ ವಿವಿಧ ಕಂಪನಿಗಳ ಸ್ವದೇಶಿ ಮತ್ತು ವಿದೇಶಿಯ ಒಟ್ಟು 10 ಪ್ಯಾಕ್ (412 ಬಾಕ್ಸ್) ಮತ್ತು 86 ಪ್ಯಾಕ್ ಸಿಗರೇಟ್‌ಗಳು (ಅಂದಾಜು ಮೌಲ್ಯ: ರೂ. 5,09,120/-).
ಹುಕ್ಕಾ ಸಾಧನಗಳು: ಹುಕ್ಕಾ ಸೇವನೆಗೆ ಬಳಸುವ ವಿವಿಧ ಆಕೃತಿಗಳ 25 ಸಾಧನಗಳು (ಅಂದಾಜು ಮೌಲ್ಯ: ರೂ. 20,500/-).
ಒಟ್ಟಾರೆಯಾಗಿ, ಮಾರಾಟ ಮತ್ತು ಸರಬರಾಜಿಗಾಗಿ ಸಂಗ್ರಹಿಸಿದ್ದ ಒಟ್ಟು ಅಂದಾಜು ಮೌಲ್ಯ ರೂ. 9,72,745/- ಬೆಲೆಬಾಳುವ ಸೊತ್ತುಗಳನ್ನು ವಶಕ್ಕೆ ಪಡೆಯಲಾಗಿದೆ.