
ಮಂಗಳೂರು: ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್ಗೆ ಎರಡು ಅತ್ಯಾಧುನಿಕ ಅಗ್ನಿಶಾಮಕ ವಾಹನಗಳನ್ನು ನಿಯೋಜಿಸಲಾಗಿದೆ. ಈ ಎರಡು ಅಗ್ನಿಶಾಮಕ ವಾಹನ(ಸಿಎಫ್ಟಿ)ಗಳ ಸೇರ್ಪಡೆಯೊಂದಿಗೆ ಮಂಗಳೂರು ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಗ್ನಿಶಾಮಕದ ಸಾಮರ್ಥ್ಯಗಳನ್ನು ಗಮನಾರ್ಹವಾಗಿ ಹೆಚ್ಚಿಸಿದಂತಾಗಿದೆ.


ಅಗ್ನಿ ಶಾಮಕ ವಾಹನಗಳನ್ನು ಆಸ್ಟ್ರಿಯಾದಿಂದ ಆಮದು ಮಾಡಿಕೊಳ್ಳಲಾಗಿದ್ದು, ರೋಸೆನ್ಬೌರ್ ಈ ವಾಹನಗಳನ್ನು ತಯಾರಿಸಿದೆ. ಪ್ರಪಂಚದಾದ್ಯಂತದ ಪ್ರಮುಖ ವಿಮಾನ ನಿಲ್ದಾಣಗಳಲ್ಲಿ ಇಂತಹ ಅಗ್ನಿಶಾಮಕ ವಾಹನಗಳು ಇವೆ. ಇವುಗಳ ಸೇರ್ಪಡೆಯು ವಿಮಾನ ನಿಲ್ದಾಣದ ಸುರಕ್ಷತೆ ಮತ್ತು ಕಾರ್ಯಾಚರಣೆಯ ಶ್ರೇಷ್ಠತೆಗೆ ಬದ್ಧತೆಯನ್ನು ಬಲಪಡಿಸುತ್ತದೆ.ಈ ವಾಹನಗಳು 12,500 ಲೀಟರ್ ನೀರು ಮತ್ತು 1,500 ಲೀಟರ್ ಫೋಮ್ ಲೋಡ್ ಅನ್ನು ಹೊತ್ತೊಯ್ಯುತ್ತವೆ, 2009ರ ಹಿಂದಿನ ಸಿಎಫ್ಟಿ ಗಳಲ್ಲಿ 10,000 ಲೀಟರ್ ನೀರು ಮತ್ತು 1,300 ಲೀಟರ್ ಫೋಮ್ ಸಾಮರ್ಥ್ಯದ್ದು ಆಗಿತ್ತು. ಬ್ಯಾಟರಿ ಚಾಲಿತ ವಾಹನಗಳು ಅವುಗಳಲ್ಲಿರುವ ಆಟೋ ಎಜೆಕ್ಟರ್ ವ್ಯವಸ್ಥೆಯನ್ನು ಶೇ 100 ಸಾಮರ್ಥ್ಯದಲ್ಲಿ 90 ಮೀಟರ್ ವರೆಗೆ ನೀರನ್ನು ಹೊರಹಾಕಲು ಅನುವು ಮಾಡಿಕೊಡುತ್ತದೆ, ಇದು ಡೀಸೆಲ್ ಬಳಕೆಯನ್ನು ಬಹಳ ಕಡಿಮೆ ಮಾಡುತ್ತದೆ. ಈ ವಾಹನದಲ್ಲಿ ನಾಲ್ವರಿಗೆ ಆಸನಗಳ ವ್ಯವಸ್ಥೆ ಇರುತ್ತದೆ. ಗಂಟೆಗೆ 120 ಕಿಮೀ ಗರಿಷ್ಠ ವೇಗದಲ್ಲಿ ವಾಹನಗಳು ಸಂಚರಿಸುವ ಸಾಮರ್ಥ್ಯ ಹೊಂದಿವೆ.